ದಿವ್ಯಾ ಹಾಗರಗಿಗೆ ಸಿಕ್ಕಿತ್ತು ಕಾಂಗ್ರೆಸ್​ ಶ್ರೀರಕ್ಷೆ! ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದು ಯಾರೆಂದು ಉಲ್ಲೇಖಸಿದ ಸಿಐಡಿ

Divya Hagaragi
Published on

ಬೆಂಗಳೂರು: ಪಿಎಸ್​ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆಯೇ ಕಲಬುರಗಿಯಿಂದ ನಾಪತ್ತೆಯಾಗಿ ಗುಜರಾತ್​ನಲ್ಲೂ ಕೆಲ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿಗೆ ಕಾಂಗ್ರೆಸ್​ನಿಂದಲೇ ಶೀರಕ್ಷೆ ಸಿಕ್ಕಿತ್ತು ಎಂಬ ವಿಷ್ಯ ಬಯಲಾಗಿದೆ.

ಏ.13ರಂದು ಕಲಬುರಗಿಯಿಂದ ಗುಜರಾತ್​ನ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ತೆರಳಿದ್ದಳು. ಅಲ್ಲಿ 3-4 ದಿನ ತಂಗಿದ್ದಳು. ಅಲ್ಲಿಂದ ಅಂಬಾಜಿ ಮಂದಿರಕ್ಕೂ ಭೇಟಿ ನೀಡಿ, ಇಲ್ಲಿಯೂ ಮೂರ್ನಾಲ್ಕು ದಿನ ಇದ್ದಳು. ಬಳಿಕ ಮಹಾರಾಷ್ಟ್ರದತ್ತ ಪಯಣ ಬೆಳೆಸಿದ್ದಳು. ಪುಣೆಗೆ ಬಂದು ಪರಿಚಿತ ಸುರೇಶ ಕಾಟೇಗಾಂವ್​ ಸಂಪರ್ಕದಲ್ಲಿದ್ದಳು. ಈತನ ಬಳಿ ಕೆಲಸಕ್ಕಿದ್ದ ಕಾಳಿದಾಸ ಬಾಡಿಗೆಗೆ ಪಡೆದಿದ್ದ ಅಪಾರ್ಟ್​ಮೆಂಟ್​ನಲ್ಲಿ ಐದು ದಿನ ಕಳೆದಿದ್ದಳು ಎಂದು ಮೂಲಗಳು ತಿಳಿಸಿವೆ. ನಂತರ ದಿವ್ಯಾಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ, ಈಕೆಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರು ಕಾಂಗ್ರೆಸ್​ ಮುಖಂಡರು ಎಂದು ಹೇಳಲಾಗಿದೆ.

ಸುರೇಶ್​ ಕಾಟೇಗಾಂವ್​ ಮಹಾರಾಷ್ಟ್ರದ ಸ್ಥಳೀಯ ಕಾಂಗ್ರೆಸ್​ ಮುಖಂಡ. ಈತನ ಸಹೋದರಿ ಸುರೇಖಾ ಕಾಂಗ್ರೆಸ್​ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸುರೇಖಾ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯಿತಿ​ ಮಾಜಿ ಅಧ್ಯಕ್ಷೆ ಹಾಗೂ ಸದ್ಯ ಸದಸ್ಯೆಯಾಗಿದ್ದಾರೆ. ಸುರೇಶ್​ಗೆ ದಿವ್ಯಾ ಪರಿಚಯವಾಗಲು ಅಫಜಲಪುರದಲ್ಲಿ ಮರಳು ಬ್ಲಾಕ್​ ಟೆಂಡರ್​ ಪಡೆಯಲು ಸಹಕರಿಸಿದ್ದೇ ಕಾರಣ ಎನ್ನಲಾಗಿದೆ. ಹೀಗಾಗಿ ದಿವ್ಯಾಗೆ ಕಾಂಗ್ರೆಸ್​ ನಾಯಕರೇ 'ಶ್ರೀರಕ್ಷೆ'ಯಾಗಿರುವುದು ಬಯಲಿಗೆ ಬರುತ್ತಿದೆ. ಈ ಅಂಶವನ್ನು ಸಿಐಡಿ ತನ್ನ ದಾಖಲೆಗಳಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ದಿವ್ಯಾ ಸದ್ಯ ಜೈಲಿನಲ್ಲಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net