PSI ಪರೀಕ್ಷೆಯಲ್ಲಿ ಅಕ್ರಮ: ಮತ್ತಿಬ್ಬರು ಪೊಲೀಸ್​ ಪೇದೆಗಳನ್ನು ಬಂಧಿಸಿದ ಸಿಐಡಿ

psi scam harish and mohan kumar
Published on

ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದ ಬಗೆದಷ್ಟೂ ಆಳ ಎಂಬಂತಾಗಿದೆ. ಈಗಾಗಲೇ 38ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇದೀಗ ಮಾಗಡಿಯ ದರ್ಶನ್​ಗೌಡನ ಬಂಧನದ ಬೆನ್ನಲ್ಲೇ ಮತ್ತಿಬ್ಬರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಇಬ್ಬರೂ ಪೊಲೀಸ್​ ಪೇದೆಗಳು. ಪಿಎಸ್​ಐ ಆಗಿ ಆಯ್ಕೆಯಾಗಿದ್ದರು.

ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಕಾನ್​ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಮತ್ತು ಬೆಂಗಳೂರಿನ ಕಲಾಸಿಪಾಳ್ಯ ಠಾಣೆಯ ಪೇದೆ ಹರೀಶ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಮೋಹನ್ ಕುಮಾರ್ ಕೂಡ ಪಿಎಸ್​ಐ ಪರೀಕ್ಷೆಯಲ್ಲಿ ಪಾಸ್​ ಆಗಿದ್ದ. ಅನುಮಾನ ಬಂದು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದಾಗ ಮೋಹನ್ ನೀಡಿದ್ದ ಕಾರ್ಬನ್ ಶೀಟ್ ಮತ್ತು ಒರಿಜಿನಲ್ ಕಾಪಿಗೂ ವ್ಯತ್ಯಾಸ ಕಂಡು ಬಂದಿತ್ತು. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೋಹನ್ ಕುಮಾರ್​ನನ್ನು ಬಂಧಿಸಿದ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹರೀಶ್ ಪಿಎಸ್​ಐ ಹುದ್ದೆಗಾಗಿ ಹರೀಶ್​ 50 ಲಕ್ಷ ರೂ.ಗೆ ಇಬ್ಬರು ವ್ಯಕ್ತಿಗಳ ಮೂಲಕ ಡೀಲ್​ ಮಾಡಿಕೊಂಡಿದ್ದ. ಈ ಪೈಕಿ 30 ಲಕ್ಷ ಹಣ ನೀಡಿ ಒಎಂಆರ್ ಶೀಟ್ ತಿದ್ದಲು ಹಣ ನೀಡಿದ್ದ. ಎಕ್ಸಾಂ ವೇಳೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಟ್ಟು ಬಂದಿದ್ದ. ಅನುಮಾನದ ಮೇಲೆ ಸಿಐಡಿ ಅಧಿಕಾರಿಗಳು ಹರೀಶ್​ನನ್ನ ವಿಚಾರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಈತನ್ನು ಬಂಧಿಸಿದ್ದಾರೆ. ಹರೀಶ್​ನ ಸಂಪರ್ಕದಲ್ಲಿದ್ದ ಇಬ್ಬರು ವ್ಯಕ್ತಿಗಳ ಬಗ್ಗೆ ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net