ಅಶಾಂತಿ ಸೃಷ್ಟಿಸಲು ಪ್ರಚೋದನಾಕರಿ ಘೋಷಣೆ

3 SGR 01
ಸಾಗರ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದರು. ಕೋಮಲ್ ರಾಘವೇಂದ್ರ, ಹೆಗಡೆ, ನಂದೀಶ್, ಶ್ರೀಧರ ಸಾಗರ, ಗಣೇಶ್, ಪವನ್ ಮಾಸೂರು, ಸಂತೋಷ್ ಇತರರಿದ್ದರು.
Published on

ಸಾಗರ: ನಗರದಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಕೆ.ಎಚ್.ಸುಧೀಂದ್ರ ಮಾತನಾಡಿ, ಈದ್ ಮಿಲಾದ್ ಅಂಗವಾಗಿ ಮುಸ್ಲಿಮರು ಸೋಮವಾರ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದರು. ಮೆರವಣಿಗೆಯಲ್ಲಿ ಹಿಂದು ಸಮುದಾಯದ ತೇಜೋವಧೆ ಮಾಡುವ ಹಾಗೂ ಬೆದರಿಕೆಯೊಡ್ಡುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ ಎಂದು ದೂರಿದರು.
ಮಾರಿಕಾಂಬಾ ದೇವಸ್ಥಾನದ ಎದುರು ಮೆರವಣಿಗೆ ಸಾಗುತ್ತಿರುವಾಗ ಮುಸ್ಲಿಂ ಸಮುದಾಯದ ಕೆಲವರು ಹಿಂದು ಧರ್ಮವನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಘೋಷಣೆ ಕೂಗಿದ್ದು ಕಂಡುಬಂದಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಅಪಾಯ ಇದೆ. ಯಾರೋ ಕೆಲವರು ಮಾಡುವ ಇಂತಹ ಕುಚೇಷ್ಟೆಗಳಿಂದ ಸಾಮರಸ್ಯ ಹಾಳಾಗುವ ಜತೆಗೆ ಪರಸ್ಪರ ದ್ವೇಷಾಸೂಯೆ ಮೂಡಲು ಕಾರಣವಾಗುತ್ತಿದೆ ಎಂದರು.
ಇತ್ತೀಚೆಗೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದುಗಳ ಮನೆಯನ್ನು ಟಾರ್ಗೆಟ್ ಮಾಡಿ ಕಲ್ಲು ತೂರಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಇದನ್ನೂ ವೇದಿಕೆ ತೀವ್ರವಾಗಿ ಖಂಡಿಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರದ ಮೆರವಣಿಗೆಯಲ್ಲಿ ಅನಗತ್ಯ ಘೋಷಣೆ ಕೂಗಿ ಸಮಾಜದ ಶಾಂತಿ ಕದಡುವ ಪ್ರಯತ್ನ ನಡೆಸಿದವರನ್ನು ಪೊಲೀಸರು ವಶಕ್ಕೆ ಪಡೆದು ಸೂಕ್ತ ವಿಚಾರಣೆ ನಡೆಸಬೇಕು. ಇಲ್ಲವಾದಲ್ಲಿ ವೇದಿಕೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೋಮಲ್ ರಾಘವೇಂದ್ರ, ಐ.ವಿ.ಹೆಗಡೆ, ನಂದೀಶ್ ಸೂರಗುಪ್ಪೆ, ಶ್ರೀಧರ ಸಾಗರ್, ಆಟೋ ಗಣೇಶ್, ಪವನ್ ಮಾಸೂರು, ಸಂತೋಷ್, ಪ್ರತಾಪ್, ಹೇಮಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net