

ಉಡುಪಿ: ಜಿಲ್ಲೆಯಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೈತರನ್ನು ಕೃಷಿಯಿಂದ ವಿಮುಖರನ್ನಾಗಿಸಲು ಯಾವುದೇ ನೆರವು ಸಿಗದಂತೆ ತಡೆದು ಅವರ ಭೂಮಿಯನ್ನು ಕಬಳಿಸುವ ಹುನ್ನಾರವನ್ನು ಮಾಡುತ್ತಿವೆ. ಹೀಗಾಗಿ ಸರ್ಕಾರ ಭತ್ತ ಬೆಳೆಯುವ ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಕ್ಷಣದಿಂದಲೇ ಕ್ವಿಂಟಾಲಿಗೆ 3,000 ರೂ. ಬೆಂಬಲ ಬೆಲೆ ನೀಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಉಡುಪಿ ಜಿಲ್ಲಾ ಕೃಷಿಕ ಸಂಘ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯದಿಂದಾಗಿ ಭತ್ತ ಬೆಳೆಯುವ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ಕಿಲೋಗೆ ರೂ.18 ರಿಂದ 22ರ ದರದಲ್ಲಿ ಭತ್ತ ಮಾರಾಟ ಮಾಡಿ, ಕೃಷಿಕ ಜೀವನ ನಡೆಸಲು ಸಾಧ್ಯವೇ ಇಲ್ಲ. ಸರ್ಕಾರ ಸಕಾಲದಲ್ಲಿ ರೈತರ ನೆರವಿಗೆ ಬಾರದಿದ್ದಲ್ಲಿ ಈಗಾಗಲೆ ಕೃಷಿ ಮಾಡಲು ಹಿಂಜರಿಯುತ್ತಿರುವ ಜಿಲ್ಲೆಯ ಕೃಷಿಕರು ಮತ್ತಷ್ಟ್ಟು ಅತಂತ್ರರಾಗಲಿದ್ದಾರೆ. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲೇ ಸರ್ಕಾರ ಬೆಂಬಲ ಬೆಲ ಘೋಷಣೆ ಮಾಡಿ ಭತ್ತ ಖರೀದಿಸುವ ವ್ಯವಸ್ಥೆ ಮಾಡಬೇಕು. ಭತ್ತ ಖರೀದಿಗಾಗಿ ಆವರ್ತ ನಿಧಿಯನ್ನು ಜಿಲ್ಲಾವಾರು ಘೋಷಣೆ ಮಾಡಬೇಕು. ಹೋಬಳಿ ಕೇಂದ್ರಗಳಲ್ಲಿ ಭತ್ತ ನಾಟಿ ಮತ್ತು ಕಟಾವು ಯಂತ್ರಗಳು ಕಡಿಮೆ ಬಾಡಿಗೆಗೆ ರೈತರಿಗೆ ಸಿಗುವಂತೆ ಮಾಡಬೇಕು. ಬೆಳೆಹಾನಿ ಸಂದರ್ಭಗಳಲ್ಲಿ ರೈತರಿಗೆ ಎಕರೆಗೆ ಕನಿಷ್ಠ ರೂ.15,000 ಮೇಲ್ಪಟ್ಟು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷರಾದ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ ಹೆರ್ಗ, ಪ್ರ.ಕಾ. ಶ್ರೀನಿವಾಸ ಭಟ್ ಕುದಿ, ರವೀಂದ್ರ ಗುಜ್ಜರಬೆಟ್ಟು, ರೈತಧ್ವನಿ ಅಧ್ಯಕ್ಷ ಜಯರಾಂ ಶೆಟ್ಟಿ, ಭಾಸ್ಕರ ಶೆಟ್ಟಿ ಮಣೂರು, ಶಿವಮೂರ್ತಿ ಉಪಾಧ್ಯಾಯ ಉಪಸ್ಥಿತರಿದ್ದರು.