

ಬೂದಿಕೋಟೆ: ಮೀಸಲಾತಿ ಗೊಂದಲದಿಂದ 17 ತಿಂಗಳಿಂದ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದೆ ಆಡಳಿತಾಧಿಕಾರಿಗಳ ಆಡಳಿತದಲ್ಲಿದ್ದ ಬಂಗಾರಪೇಟೆ ಪುರಸಭೆಯಲ್ಲೀಗ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಗಿಟ್ಟಿಸಿಕೊಳ್ಳುವ ಚಟುವಟಿಕೆಗಳು ಗರಿಗೆದರಿವೆ.
ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರುವಂತಾಗಿದೆ. ಪುರಸಭೆ ಅಧ್ಯಕ್ಷ ಸ್ಥಾನ ಎಸ್ಸಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಪುರಸಭೆ ಆಡಳಿತ ಮತ್ತೆ ಅದೇ ಪಕ್ಷಕ್ಕೆ ದೊರೆಯುವ ಲಕ್ಷಣಗಳು ಹೆಚ್ಚಿವೆ. ಏಕೆಂದರೆ ಅಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಾಗಿದ್ದು, ವಿವೇಕಾನಂದ ನಗರ ವಾರ್ಡ್ನ ಕಾಂಗ್ರೆಸ್ ಸದಸ್ಯ ಗೋವಿಂದ ಒಬ್ಬರೆ ಎಸ್ಸಿ ಮೀಸಲಿನಿದ್ದ ಗೆದಿದ್ದಾರೆ. ಹಾಗಾಗಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇಲ್ಲ. ಆದರೆ, ಜೆಡಿಎಸ್ನಿಂದ ಸುನೀಲ್ ಮತ್ತು ಪಕ್ಷೇತರ ಸದಸ್ಯ ಕೆರೆಕೋಡಿ ವಾರ್ಡ್ನ ಕಪಾಲಿ ಶಂಕರ್ ಎಸ್ಸಿ ಮೀಸಲಿನಿಂದ ಆಯ್ಕೆಯಾಗಿದ್ದು, ಅವರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಆದರೆ, ಅವರ ಆಯ್ಕೆಗೆ ಸದಸ್ಯರ ಬೆಂಬಲದ ಕೊರತೆ ಇದೆ. ಇದರ ನಡುವೆ, ಪುರಸಭೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸದಸ್ಯರಿಗೆ ಮೀಸಲಾತಿ ನಿರಾಸೆ ಮೂಡಿಸಿದೆ. ಸಾಮಾನ್ಯ ಅಥವಾ ಬಿಸಿಎಂ(ಎ) ಮೀಸಲು ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಎಸ್ಸಿ ಮೀಸಲಾತಿ ಬೇಸರ ತರಿಸಿದೆ.
ಕೈಗೆ ಅಧಿಕಾರ ನಿಶ್ಚಿತ: ಒಟ್ಟು 27 ಸದಸ್ಯ ಬಲದ ಪುರಸಭೆ ಆಡಳಿತದಲ್ಲಿ ಕಾಂಗ್ರೆಸ್ನ 20 ಸದಸ್ಯರಿದ್ದು, ಜೆಡಿಎಸ್ನಿಂದ ಇಬ್ಬರು, ಬಿಜೆಪಿಯಿಂದ ಒಬ್ಬರು ಹಾಗೂ ನಾಲ್ಕು ಮಂದಿ ಪಕ್ಷೇತರ ಸದಸ್ಯರಿದ್ದಾರೆ. ಹೀಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಯಾರೇ ಆದರೂ ಅದು ಕಾಂಗ್ರೆಸ್ ಸದಸ್ಯರ ಆಯ್ಕೆಯಾಗಿರುವುದು ಖಚಿತ. ಇದರ ನಡುವೆ ಪಕ್ಷೇತರ ಸದಸ್ಯ ಕಪಾಲಿ ಶಂಕರ್ ಈಗ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವುದರಿಂದ ಕೊನೇಗಳಿಗೆಯಲ್ಲಿ ಆಪರೇಷನ್ ಕಮಲದ ಮೂಲಕವಾದರೂ ಅಧ್ಯಕ್ಷರಾಗಬೇಕೆಂಬ ಆಸೆ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ.19ಕ್ಕೆ ಚುನಾವಣೆ ನಿಗದಿಯಾಗಿದ್ದು, ಗೋವಿಂದ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರುವುದರಿಂದ ಕುಂಬಾರಪಾಳ್ಯ ವಾರ್ಡ್ನ ಚಂದ್ರವಾಣಿ ಮಂಜುನಾಥ್ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್ನಲ್ಲಿ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾಗಿರುವುದು ಇವರೊಬ್ಬರೇ.
ಕೋಪ ತಣಿಸಲು ಮುಂದಾದ ಕಾಂಗ್ರೆಸ್ ಪಾಳಯ: ಕಳೆದ ಅವಧಿಯಲ್ಲೇ ಚಂದ್ರವಾಣಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದಲ್ಲಿನ ಒಳಒಪ್ಪಂದಂತೆ ಹಿಂದಿನ ಅಧ್ಯಕ್ಷೆ ಫರ್ಜಾನ ಅಧಿಕಾರ ಬಿಟ್ಟುಕೊಡದೆ ಅವಧಿಯನ್ನು ಪೂರ್ಣಗೊಳಿಸಿದ್ದರು. ಈಗ ಚಂದ್ರವಾಣಿ ಅವರನ್ನು ಉಪಾಧ್ಯಕ್ಷರಾಗಿ ಮಾಡಿ, ಅವರ ಕೋಪ ತಣಿಸಲು ಪಕ್ಷ ಮುಂದಾಗಿದೆ. ಆ.19ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. ಯಾವುದೇ ಚುನಾವಣೆ ನಡೆದರೂ ರಾಜಕೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟ ಸಾಮಾನ್ಯ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಕಂಡುಬರುತ್ತಿಲ್ಲ.