

ದೊಡ್ಡಬಳ್ಳಾಪುರ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಒಡಹುಟ್ಟಿದ ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಅಣ್ಣನೇ ಬರ್ಬರವಾಗಿ ಕೊಂದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಶೀಲಮ್ಮ(40) ಮೃತ ದುರ್ದೈವಿ. ಈಕೆಯ ಅಣ್ಣ ನಾಗರಾಜ್ (45) ಕೊಲೆ ಆರೋಪಿ. ಅವಿವಾಹಿತೆಯಾಗಿದ್ದ ಸುಶೀಲಮ್ಮ, ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿಕೊಂಡು ದಿನದೂಡುತ್ತಿದ್ದರು. ಕೆಲಸ ಅರಸಿಕೊಂಡು ಆಗಾಗ ಮೂರ್ನಾಲ್ಕು ತಿಂಗಳು ಗ್ರಾಮ ತೊರೆಯುತ್ತಿದ್ದರು ಎನ್ನಲಾಗಿದೆ.
ಏತನ್ಮಧ್ಯೆ ನಾಗರಾಜ್ 11 ಲಕ್ಷ ರೂಪಾಯಿಗೆ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿದ್ದ. ಸಹಿ ಹಾಕುವಂತೆ ಸುಶೀಲಮ್ಮಗೆ ನಾಗರಾಜು ಒತ್ತಡ ಹಾಕಿದ್ದ. ಆದರೆ ಹಣದಲ್ಲಿ ತನಗೂ ಪಾಲು ಬೇಕು ಎಂದು ಸುಶೀಲಮ್ಮ ಪಟ್ಟುಹಿಡಿದಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಅಣ್ಣ, ತಂಗಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.