

ಎನ್.ಆರ್.ಪುರ: ಕಡಹಿನಬೈಲು ಗ್ರಾಮದ ಮೂರು ಸೇತುವೆಗಳು ಹಾಳಾಗಿದ್ದು ಸರ್ಕಾರದಿಂದ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಭರವಸೆ ನೀಡಿದರು.
ಬುಧವಾರ ತಾಲೂಕಿನ ಶೆಟ್ಟಿಕೊಪ್ಪ ಸಮೀಪದ ಕಡಹಿನಬೈಲು ಗ್ರಾಮದ ಶೆಟ್ಟಿಕೊಪ್ಪ, ಆಲಂದೂರು ಸಂಪರ್ಕಿಸುವ ಸೇತುವೆ, ಮುಖ್ಯ ರಸ್ತೆಯಿಂದ ಹಾರೇಕೊಪ್ಪ, ಗಾಂಧಿ ಗ್ರಾಮ ಸಂಪರ್ಕಿಸುವ ಸೇತುವೆ ಹಾಗೂ ಮುಖ್ಯ ರಸ್ತೆಯಿಂದ ನೇರ್ಲೆಕೊಪ್ಪ, ಮಾವಿನ ಕೆರೆ ಸಂಪರ್ಕ ರಸ್ತೆಯಲ್ಲಿ ಬರುವ ಸೇತುವೆಗಳನ್ನು ವೀಕ್ಷಿಸಿ ಮಾಡಿದರು
ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸೇತುವೆಗೆ ಹಾನಿಯಾಗಿದೆ. ಸೇತುವೆ ಮೇಲೆ ನೀರು ನುಗ್ಗಿ ಜನರ ಓಡಾಡಕ್ಕೂ ತೊಂದರೆಯಾಗಿತ್ತು. ತುರ್ತಾಗಿ ಸೇತುವೆಗೆ ಕಾಯಕಲ್ಪ ನೀಡಬೇಕಿದೆ. ಮುಖ್ಯವಾಗಿ ಸೇತುವೆ ಎರಡೂ ಬದಿ ಕೈ ಪಿಡಿ ನಿರ್ಮಿಸಬೇಕಾಗಿದೆ. ಸೇತುವೆ ಎತ್ತರಿಸಬೇಕು. ಸೇತುವೆಗೆ ದೊಡ್ಡ ಪೈಪ್‌ಗಳನ್ನು ಅಳವಡಿಸಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಸಿ ಮುಂದಿನ ವರ್ಷದೊಳಗೆ ಈ ಮೂರೂ ಸೇತುವೆಗೂ ಕಾಯಕಲ್ಪ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಕಳೆದ 2 ದಿನಗಳ ಭಾರೀ ಮಳೆಗೆ ಸೇತುವೆ ಮೇಲೆ ನೀರು ಹರಿದು ತೊಂದರೆಯಾಗಿದೆ. ಗ್ರಾಪಂನಿಂದ ತಕ್ಷಣ ಸ್ಪಂದಿಸಿ ಸೇತುವೆಗೆ ಅಡ್ಡಲಾಗಿದ್ದ ಮರದ ದಿಮ್ಮಿಗಳನ್ನು ತೆಗೆಸಿ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್‌ಕುಮಾರ್ ಮಾತನಾಡಿ, 4 ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಈ ಸೇತುವೆ ವೀಕ್ಷಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಕಾಡಾ ಅಧ್ಯಕ್ಷರು ಭೇಟಿ ನೀಡಿದ್ದು ಶಾಶ್ವತ ಪರಿಹಾರ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಸದಸ್ಯರಾದ ಚಂದ್ರಶೇಖರ್, ವಾಣಿ ನರೇಂದ್ರ, ತಾಪಂ ಮಾಜಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಗ್ರಾಪಂ ಮಾಜಿ ಉಪಾಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಕರುಗುಂದ ನಂದೀಶ್, ಎಲ್ದೋಸ್, ಅಂಬರೀಶ್, ಪರಮೇಶ್ವರ, ಚೇತನ್, ಅಬ್ದುಲ್, ಪಿಎಎಸ್‌ಐ ಬಿ.ಎಸ್.ನಿರಂಜನಗೌಡ, ಪಿಡಿಒ ವಿಂದ್ಯಾ, ತಾಪಂ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮನೀಶ್ ಮತ್ತಿತರರು ಇದ್ದರು.