

ನರೇಗಲ್ಲ: ಹನ್ನೆರಡನೇ ಶತಮಾನದ ಅನುಭವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ ಜೊತೆಯಾಗಿ ಕಾಯಕದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಲುವಾಗಿ 250ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂದು ಶಿಕ್ಷಕ ಚಂದ್ರಶೇಖರ ಕೇಸರಿ ಹೇಳಿದರು.
ಸಮೀಪದ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಜಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದ ಅಪ್ಪಣ್ಣನವರ ಸಾಮಾಜಿಕ ಚಿಂತನೆಗಳು ಮತ್ತು ವಚನಗಳು ಮನುಕುಲದ ಉದ್ಧಾರಕ್ಕೆ ದಾರಿದೀಪವಾಗಿವೆ. ವಿಶ್ವದ ಮೊದಲ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ ಸೇವೆ ಸಲ್ಲಿಸಿದರು. ಅವರು ತಮ್ಮ ಕಾಯಕ ನಿಷ್ಠೆ ಮತ್ತು ಮೌಲ್ಯಯುತ ವಚನಗಳಿಂದ ಬಸವಣ್ಣನವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಜ್ಞಾನ, ಅಸಮಾನತೆ, ಜಾತಿ ಪದ್ಧತಿ, ಮೂಢನಂಬಿಕೆ ವಿರುದ್ಧ ಹೋರಾಡಿ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದರು. ಇವರ ಸಾಮಾಜಿಕ ಚಿಂತನೆಗಳು ವೈಚಾರಿಕ ಸಮಾಜಕ್ಕೆ ಚೈತನ್ಯ ನೀಡುತ್ತವೆ ಎಂದರು.
ಮುಖ್ಯ ಶಿಕ್ಷಕ ಬಿ.ವಿ. ದೇಸಾಯಿಪಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೂದಿಹಾಳ ಗ್ರಾಮದ ಹಡಪದ ಸಮಾಜದ ಅಂದಪ್ಪ ಹಡಪದ, ಬಸವರಾಜ ಹಡಪದ, ಶಿವಪ್ಪ ಹಡಪದ, ಮರಬಸಪ್ಪ ಹಿರೇಮಠ ಹಾಗೂ ಅತಿಥಿ ಶಿಕ್ಷಕಿಯರಾದ ಐಶ್ವರ್ಯ ಬಿಂಗಿ, ಪರ್ವೀನ್ ಮುಲ್ಲಾ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.