ರಾಜ್ಯದ ಜನ ಜನೋತ್ಸವದಂತಹ ಕಾರ್ಯಕ್ರಮ ಮೆಚ್ಚುತ್ತಾರೆಯೇ ಹೊರತು, ವ್ಯಕ್ತಿಯಾಧಾರಿತ ಉತ್ಸವವನ್ನಲ್ಲ: ಸಚಿವ ಸುನೀಲ್​ಕುಮಾರ್

Sunilkumar
Published on

ಬೆಂಗಳೂರು:  ರಾಜ್ಯದ ಜನತೆ ಜನೋತ್ಸವದಂತಹ ಕಾರ್ಯಕ್ರಮಗಳನ್ನು ಮೆಚ್ಚುತ್ತಾರೆಯೇ ವಿನಾ ವ್ಯಕ್ತಿ ಆಧಾರಿತ ಉತ್ಸವಗಳನ್ನು ಸಾರಸಗಟಾಗಿ ತಿರಸ್ಕರಿಸಲಿದ್ದಾರೆ ಎಂದು ಇಂಧನ ಸಚಿವ  ಸುನೀಲ್‍ಕುಮಾರ್ ಪರೋಕ್ಷವಾಗಿ  ಸಿದ್ದರಾಮೋತ್ಸವಕ್ಕೆ ತಿರುಗೇಟು ನೀಡಿದ್ದಾರೆ.ಜನತೆ ಒಂದು ಪಕ್ಷದ ಸಿದ್ದಾಂತ, ವ್ಯಕ್ತಿಯ ವಿಚಾರಧಾರೆ, ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಒಪ್ಪುತ್ತಾರೆ. ಯಾವುದೋ ಒಬ್ಬ ವ್ಯಕ್ತಿಯನ್ನು ಆರಾಧಿಸುವ  ಉತ್ಸವಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಇರುವ ವ್ಯತ್ಯಾಸ ತುಂಬ ಸರಳ, ನಾವು ಜನರ ಮಧ್ಯೆ ನಮ್ಮ  ಸರ್ಕಾರ ಮೂರು ವರ್ಷಗಳ ಅವಧಿಯಲ್ಲಿ ಏನು ಮಾಡಿದೆ ಎಂಬುದನ್ನು ಜನತೆಯ ಮುಂದಿಡುತ್ತೇವೆ, ಆದರೆ ಕಾಂಗ್ರೆಸ್‍ನವರು ವ್ಯಕ್ತಿ ಆಧಾರಿತ ಕಾರ್ಯಕ್ರಮ ಮಾಡುತ್ತಿದ್ದಾರೆ  ಎಂದು ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಾಯಲ್ಲಿ ಹೇಳಲಾಗದ್ದನ್ನು ತಮ್ಮ ಆಪ್ತ ಜಮೀರ್ ಅಹಮ್ಮದ್ ಖಾನ್ ಮೂಲಕ ಹೇಳಿಸಲು ಹೊರಟಿದ್ದಾರೆ. ಇದು ಸಹಜವಾಗಿ ಕೆಪಿಸಿಸಿ ಅಧ್ಯಕ್ಷರಿಗೆ  ಬೇಸರ ತಂದಿದೆ ಎಂದು ಕುಟುಕಿದರು.

ತನ್ನ ಬಾಯಲ್ಲಿ ಹೇಳಲಾಗದ್ದನ್ನು ಸಿದ್ದರಾಮಯ್ಯನವರು ಜಮೀರ್  ಮೂಲಕ ಹೇಳಿಸುತ್ತಿದ್ದಾರೆ. ಈಗ  ಎಐಸಿಸಿ ಜಮೀರ್‍ಗೆ ನೋಟಿಸ್ ಕೊಟ್ಟಿರುವುದನ್ನು ನೋಡಿದರೆ ಇದು ಸಿದ್ದರಾಮಯ್ಯನವರಿಗೆ ನೋಟಿಸ್ ಕೊಟ್ಟಂತೆ ಎಂದು ಲೇವಡಿ ಮಾಡಿದರು.ಜಾತಿ ಜಾತಿಗಳ ನಡುವೆ ಒಡಕು ಹುಟ್ಟಿಸುತ್ತಿರುವುದು ಕಾಂಗ್ರೆಸ್. ಇದನ್ನು ಅಧಿಕಾರ ಅವಧಿಯಲ್ಲಿ ಪೋಷಿಸಿಕೊಂಡು ಬಂದವರು ಸಿದ್ದರಾಮಯ್ಯ ಇದಕ್ಕೆ ಕಡಿವಾಣ ಹಾಕುವುದಕ್ಕಾಗಿಯೇ ಜಮೀರ್ ಮೂಲಕ ಸಿದ್ದರಾಮಯ್ಯಗೆ ನೋಟಿಸ್ ಕೊಟ್ಟಿದೆ ಎಂದು ಅರ್ಥೈಸಿದರು.ಯಾವುದೇ ರಾಜಕೀಯ ಪಕ್ಷ ಒಂದು ಸಮುದಾಯವನ್ನು ನಂಬಿಕೊಂಡು ಸರ್ಕಾರ ಮುನ್ನಡೆಸಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಪ್ರತಿಯೊಂದು ಸಮುದಾಯಗಳಿಗೆ ಅವಕಾಶ ಕೊಟ್ಟರೆ ಮಾತ್ರ ಸಮಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.

ಬಿಜೆಪಿ ಎಲ್ಲ ಸಮಾಜಕ್ಕೂ ಸಾಮಾಜಿಕ ನ್ಯಾಯ  ಒದಗಿಸುವ ರಾಜಕೀಯ ಪಕ್ಷ, ಹೀಗಾಗಿಯೇ ಇಲ್ಲಿ ಎಲ್ಲರಿಗೂ ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಸ್ಥಾನಮಾನಗಳು ಸಿಗುತ್ತವೆ, ಬೇರೆ ಪಕ್ಷದಂತೆ ಬಿಜೆಪಿ ವ್ಯಕ್ತಿ ಇಲ್ಲವೇ ಕುಟುಂಬ ಆಧಾರಿತ ಪಕ್ಷವಲ್ಲ ಎಂದು ಸುನೀಲ್‍ಕುಮಾರ್ ವಾಗ್ದಾಳಿ ನಡೆಸಿದರು. ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬದವರು ಯಾವುದೇ ತಪ್ಪು ಮಾಡಿಲ್ಲ ಎಂದರೆ ಯಾವುದೇ ತನಿಖೆ ಸಂಸ್ಥೆಗೂ ಹೆದರಬೇಕಾದ ಅಗತ್ಯವಿಲ್ಲ, ಯಾರು ತಪ್ಪು ಮಾಡುತ್ತಾರೋ ಅವರು ಹೆದರುತ್ತಾರೆ. ನಾವು ತಪ್ಪು ಮಾಡಿಲ್ಲ ಎಂದಾದಾಗ ಇಡಿಗೆ ಭಯಪಡಬೇಕಾದ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಭಯವಿದ್ದರು ವಿಚಾರಣೆಗೆ ಅಡ್ಡಿಪಡಿಸುತ್ತಾರೆ. ಹಿರಿಯರಾದ ರಮೇಶ್‍ಕುಮಾರ್ ಅವರು ನಾವು ಗಾಂಧಿ ಕುಟುಂಬದ ಹೆಸರಿನಲ್ಲಿ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಬಹಿರಂಗವಾಗಿಯೇ ಭ್ರಷ್ಟಾಚಾರ ಒಪ್ಪಿಕೊಳ್ಳುತ್ತಾರೆ. ಇನ್ನೊಂದು ಕಡೆ ಇಡಿ ವಿಚಾರಣೆಗೆ ಪ್ರತಿಭಟನೆ ಮಾಡುತ್ತಾರೆ, ಕಾಂಗ್ರೆಸ್‍ಗೆ ಯಾವುದೇ ಸ್ಪಷ್ಟ ನಿಲುವು ಇಲ್ಲ ಎಂದು ಟೀಕಿಸಿದರು.

ಇದೇ 28ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ  ಪೂರ್ಣಗೊಳ್ಳಲಿದೆ. ನಮ್ಮ ಪಕ್ಷದ ಹಿರಿಯರಾದ ಬಿ.ಎಸ್.ಯಡಿಯೂರಪ್ಪನವರ ಎರಡು ವರ್ಷ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷ ಅಧಿಕಾರ ಪೂರ್ಣಗೊಳಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.  ನಮ್ಮ ಸರ್ಕಾರ  ಕಾರ್ಯಕ್ರಮಗಳು ಹಾಗೂ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಕಬೇಕೆಂಬುದು ನಮ್ಮ ಗುರಿ. ಹೀಗಾಗಿಯೇ 28ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಜನೋತ್ಸವ ಕಾರ್ಯಕ್ರಮವನ್ನು ನಡೆಸಲಿದ್ದೇವೆ ಜಿಲ್ಲಾ ಕೇಂದ್ರಗಳಲ್ಲೂ ಇದು ನಡೆಯಲಿದೆ ಎಂದು  ಅವರು ಹೇಳಿದರು.

ಹಲವು ಸುಧಾರಣೆ: ನಾನು ಇಂಧನ ಸಚಿವನಾದ ನಂತರ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದೇನೆ, ಇದು ಜನಸ್ನೇಹಿ ಇಲಾಖೆಯಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದರು.

ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದೇವೆ, ಮನೆಯಲ್ಲಿ ವಿದ್ಯುತ್ ಇಲ್ಲದವರಿಗೆ ಬೆಳಕು ಯೋಜನೆ ಮೂಲಕ ಮನೆಗಳಿಗೆ ವಿದ್ಯುತ್ ಸಂಪರ್ಕ,  ಎಸ್ಸಿ-ಎಸ್ಟಿ ಸಮುದಾಯಕ್ಕೆ ಉಚಿತ 75 ಯೂನಿಟ್ ವಿದ್ಯುತ್ ಕೊಡುತ್ತಿರುವುದು ನಮ್ಮ  ಇಲಾಖೆಯ ಸಾಧನೆ ಎಂದು ಪ್ರಶಂಶಿಸಿದರು.

ರಾಜ್ಯಾದ್ಯಂತ ಸುಮಾರು  3ರಿಂದ 4 ಲಕ್ಷ ಕೆಟ್ಟುಹೋದ ಟ್ರಾನ್ಸ್​ಫರ್ಮಗಳನ್ನು 24 ಗಂಟೆಯಲ್ಲಿ ಬದಲಾವಣೆ ಮಾಡುವ ಅಭಿಯಾನವನ್ನು ನಡೆಸಿದವು. ಇದಕ್ಕೂ ಕೂಡ ಉತ್ತಮ ಪ್ರತಿಕ್ರಿಯೆ ಕಂಡುಬಂದಿತು. ಬೆಂಗಳೂರಿನಲ್ಲಿ  ಒಸಿ ಪ್ರಮಾಣ ಪತ್ರ ಇಲ್ಲದವರಿಗೆ ಹಿಂದಿನ ಸರ್ಕಾರದ ಪ್ರಮಾದದಿಂದಾಗಿ  ಈಗ 5 ಲಕ್ಷ ಮನೆಗಳಿಗೆ ವಿದ್ಯುತ್ ಸಿಕ್ಕಿದೆ. ಕೆಪಿಟಿಸಿಎಲ್‍ನಲ್ಲೂ  ದೊಡ್ಡ ಸಾಧನೆ ಮಾಡಿದ್ದೇವೆ  ಎಂದು  ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net