

ಚಳ್ಳಕೆರೆ: ಶಿಕ್ಷಕರ ಸೇವೆ ಸಮಾಜದಲ್ಲಿ ಮಹತ್ವವಾದ ಗೌರವಕ್ಕೆ ಅರ್ಹವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಭವಿಷ್ಯ ಶಾಲಾ ತರಗತಿಗಳಲ್ಲಿ ನಿರ್ಮಾಣವಾಗುತ್ತದೆ ಎನ್ನುವ ಚಿಂತಕರ ಮಾತು ಸತ್ಯವಾಗಿದ್ದು, ಪ್ರತಿ ಕ್ಷೇತ್ರದ ಪ್ರಗತಿ ಮತ್ತು ಸಾಧನೆಗೆ ಆಧಾರವಾಗಿ ನಿಲ್ಲುವ ಪ್ರತಿಭಾವಂತರನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರು ಕೈಗೊಳ್ಳಬೇಕಿದೆ. ಪ್ರಾಥಮಿಕ ಹಂತದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸುವ ಮತ್ತು ಬುದ್ಧಿವಂತರನ್ನಾಗಿ ಮಾಡುವ ಜಾಣ್ಮೆ ಇರಬೇಕು. ಅಂಬೇಡ್ಕರ್ ಆಶಯದಂತೆ ಶಿಕ್ಷಣದಿಂದ ದೇಶದ ಸಮಗ್ರ ಬದಲಾವಣೆ ಬಯಸುವ ಸಂಕಲ್ಪ ಶಿಕ್ಷಕರ ಕರ್ತವ್ಯ ಆಗಬೇಕು ಎಂದು ಹೇಳಿದರು.
ಅತ್ಯಂತ ಕಡಿಮೆ ಮಳೆ ಬೀಳುವ ತಾಲೂಕಿನಲ್ಲಿ ಶಿಕ್ಷಣದ ಪ್ರಗತಿ ಕಾಣಬೇಕಿದೆ. 2022-23ನೇ ಸಾಲಿನ ಶೈಕ್ಷಣಿಕ ಫಲಿತಾಂಶದಲ್ಲಿ ತಾಲೂಕಿಗೆ 2ನೇ ಸ್ಥಾನ ಸಿಕ್ಕಿದ್ದು, ಪ್ರಸಕ್ತ ವರ್ಷದಲ್ಲಿ ಶೇ.100ರಷ್ಟು ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು.
ಶೈಕ್ಷಣಿಕ ಗುರಿ ಸಾಧನೆಯ ದೃಷ್ಟಿಯಿಂದ ಶಾಲಾ-ಕಾಲೇಜುಗಳ ಕಟ್ಟಡ ನಿರ್ಮಾಣ ಸೇರಿ ಅಗತ್ಯ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಭಾರತೀಯ ಶಿಕ್ಷಣ ಮತ್ತು ಗುರು ಪರಂಪರೆಗೆ ದೊಡ್ಡ ಇತಿಹಾಸವಿದೆ. ದೇಶದ ಬಹುಪಾಲು ಜನರನ್ನು ಅಕ್ಷರದಿಂದ ವಂಚಿತರಾಗಿಸಿರುವ ಕಳಂಕವೂ ದೇಶದ ಮೇಲಿದೆ ಎಂದರು.
1946ರಲ್ಲಿ ಶಾಲೆ ಆರಂಭಿಸಿ ಸಮಾನ ಶಿಕ್ಷಣ ಕೊಡಲು ಮುಂದಾದ ಮಹರಾಷ್ಟ್ರದ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಶಿಕ್ಷಕರ ದಿನಾಚರಣೆಯಲ್ಲಿ ಅವರನ್ನು ಸ್ಮರಿಸಬೇಕು. ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಅವರ ಸಮಾನತೆಯ ದೃಷ್ಟಿಕೋನದ ಶಿಕ್ಷಣ ನಮಗೆ ಸಿಗಬೇಕಿದೆ ಎಂದು ಹೇಳಿದರು.
ಶಿಕ್ಷಣದ ಮಹತ್ವ ಕಳೆದುಕೊಳ್ಳುತ್ತಿರುವ ದೇಶದಲ್ಲಿ ಗುರುಕುಲ ಪರಂಪರೆ ಆರಂಭಿಸಬೇಕು ಎನ್ನುವ ಚಿಂತನೆ ನಡೆಯುತ್ತಿದೆ. ಹೊಸ ಶಿಕ್ಷಣ ನೀತಿ ಹಳೆಯ ಅವ್ಯವಸ್ಥೆಗೆ ಔಷಧ ಆಗಬೇಕು. ಆದರೆ, ಆಡಳಿತ ಸರ್ಕಾರಗಳು ಪಠ್ಯ ರೂಪಿಸುವಲ್ಲಿ ರಾಜಕೀಯ ಬಲ ತೋರಿಸಲಾಗುತ್ತಿದೆ ಎಂದು ಬೇಸರಿಸಿದರು.
ಪಠ್ಯ ಸಮಾಜ ಚಿಂತಕರ ವಿವೇಚನೆಯಲ್ಲಿ ಸ್ಥಾಪಿತವಾಗಬೇಕು. ಪಠ್ಯವನ್ನು ವಿವೇಚನೆಗೆ ಒಳಪಡಿಸಿಕೊಂಡು ಬೋಧನೆ ಮಾಡುವ ಬುದ್ಧಿವಂತಿಕೆ ಶಿಕ್ಷಕನಲ್ಲಿ ಇರಬೇಕು ಎಂದು ಹೇಳಿದರು.
ಬಿಇಒ ಕೆ.ಎಸ್.ಸುರೇಶ್, ತಾಪಂ ಇಒ ಜಿ.ಕೆ.ಹೊನ್ನಯ್ಯ ಮಾತನಾಡಿದರು. ಮಾಜಿ ಸದಸ್ಯ ಟಿ.ಗಿರಿಯಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯರಾದ ಸಾವಿತ್ರಮ್ಮ, ಸುಮಕ್ಕ, ಕವಿತಾ, ಸುಮಾ, ಬಿ.ಟಿ.ರಮೇಶ್‌ಗೌಡ, ಪ್ರಾಚಾರ್ಯ ಎಂ. ರವೀಶ್, ಎಂ.ತಿಪ್ಪೇಸ್ವಾಮಿ, ಎಸ್. ಸಿದ್ದೇಶ್ವರ, ಸಿ.ಟಿ. ವೀರೇಶ್, ಡಿ.ಟಿ. ಹನುಮಂತರಾಯ, ಡಿ. ಮಹಾಲಿಂಗಪ್ಪ, ಸಿ. ನಾಗರಾಜ, ಎಚ್. ಹನುಮಂತಪ್ಪ, ಜಿ.ಟಿ. ವೀರಭದ್ರನಾಯಕ, ಡಿ.ಟಿ.ಶ್ರೀನಿವಾಸನ್, ಸಣ್ಣಪಾಲಯ್ಯ, ಬಿ. ರಾಜಕುಮಾರ್, ಮಾರುತಿ ಭಂಡಾರಿ, ಗಿರೀಶ್‌ಬಾಬು, ಎ. ಚನ್ನಕೇಶವ ಇದ್ದರು.