

ಭಟ್ಕಳ: ಆತ್ಮಹತ್ಯೆ ಮುಂದಾಗುವವರು ಮನಸನ್ನು ಕೆಲ ನಿಮಿಷ ನಿಯಂತ್ರಿಸಿಕೊಂಡರೆ ಅಂತಹ ಯೋಚನೆಯಿಂದ ದೂರವಾಗಿ ದುರಂತ ತಪ್ಪಿಸಬಹುದು ಎಂದು ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಕೆ. ಹೇಳಿದರು.
ಪಟ್ಟಣದ ಶ್ರೀ ನಾಗಯಕ್ಷೇ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಜೀವನಕ್ಕಿಂತ ಸಮಸ್ಯೆಗಳು ದೊಡ್ಡದಲ್ಲ. ನಿಮಗೆ ಸಮಸ್ಯೆ ಇದ್ದರೆ ನಮ್ಮ ಬಳಿ ಬನ್ನಿ. ಪ್ರತಿದಿನ ನಾವು ನೂರಾರು ಸಮಸ್ಯೆಗಳನ್ನು ಬಗೆಹರಿಸಿರುತ್ತೇವೆ. ಗೆಳೆಯರ ವರ್ತನೆ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಅದರಲ್ಲಿ ವ್ಯತ್ಯಾಸ, ಬದಲಾವಣೆ ಇದ್ದರೆ ಅದನ್ನು ಶಿಕ್ಷಕರ, ಪಾಲಕರ ಗಮನಕ್ಕೆ ತಂದು ಅವರು ಒತ್ತಡದಿಂದ ಹೊರಬರುವಂತೆ ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ವಿದ್ಯಾರ್ಥಿಗಳು ಕ್ಷುಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚುತ್ತಿದೆ. ಇದರಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವವೂ ಇದೆ. ಪರಿಹಾರವಿಲ್ಲದ ಯಾವುದೆ ಸಮಸ್ಯೆಗಳಿಲ್ಲ ಎಂದರು.
ನಾಗಯಕ್ಷೇ ಧರ್ಮದೇವಿ ಸಂಸ್ಥಾನದ ರಾಮದಾಸ ಪ್ರಭು ಮಾತನಾಡಿದರು. ಮಂಗಳೂರಿನ ಕೆ.ಎಸ್. ಹೆಗಡೆ ಆಸ್ಪತ್ರೆಯ ಮನರೋಗ ತಜ್ಞ ಡಾ. ಅರುಣ ಭಟ್, ಆತ್ಮಹತ್ಯೆಯ ಕಾರಣಗಳು ಮತ್ತು ಅದನ್ನು ತಡೆಗಟ್ಟುವಿಕೆಯ ಕುರಿತು ಮಾಗೋಪಾಯಗಳ ಕುರಿತು ಮಾಹಿತಿ ನೀಡಿದರು. ಹದಿಹರೆಯದ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ವಿದ್ಯಾರ್ಥಿಗಳಲ್ಲಿ ಉಲ್ಲಾಸ ತುಂಬಿದರು. ಸರ್ಕಾರಿ ಆಸ್ಪತ್ರೆಯ ವಿಶ್ವ ಪೂಜಾರಿ, ವೆಂಕಟೇಶ ನಾಯ್ಕ, ಇತರರಿದ್ದರು.