

ಪ್ರಶಾಂತ ಭಾಗ್ವತ ಉಡುಪಿ
ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವ ಗಣತಿದಾರ ಶಿಕ್ಷಕರಿಗೆ ಹೊಸ ತಲೆಬಿಸಿ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ (ಅ.18) ಸಮೀಕ್ಷೆ ಕಾರ್ಯ ಮುಕ್ತಾಯಗೊಳ್ಳಲಿದ್ದು, ಜನರ ಹಲವು ಅಂಕಿ-ಅಂಶಗಳನ್ನು ದೃಢೀಕರಣ ನಮೂನೆಯಲ್ಲಿ ನೀಡುವಂತೆ ಸರ್ಕಾರ ಸೂಚಿಸಿದೆ.
ಈಗಾಗಲೇ ಗಣತಿ ಕಾರ್ಯದಿಂದ ಬಸವಳಿದ ಶಿಕ್ಷಕರಿಗೆ ಈ ಹೊಸ ಸೂಚನೆಯಿಂದ ಅಸಮಾಧಾನ ಉಂಟಾಗಿದೆ. ಗಣತಿ ಕಾಲದಲ್ಲಿಯೇ ಈ ಮಾಹಿತಿ ಸಂಗ್ರಹಿಸುವಂತೆ ತಿಳಿಸದೆ ಗಣತಿ ಮುಗಿಯುವ ಸಂದರ್ಭದಲ್ಲಿ ಕೇಳುವುದು ಎಷ್ಟು ಸರಿ ಎನ್ನುವುದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಶ್ನೆಯಾಗಿದೆ.
ಪಡಿತರ ಚೀಟಿ ಆಧಾರದಲ್ಲಿ ಸಮೀಕ್ಷೆ ಮಾಡಿದ ಮನೆಗಳ ಸಂಖ್ಯೆ, ಆಧಾರ್ ಆಧಾರಿತ ಗಣತಿ ಮನೆಗಳ ಸಂಖ್ಯೆ, ಮಾಹಿತಿ ನೀಡದವರ ಸಂಖ್ಯೆ, ಸಮೀಕ್ಷೆಗೆ ಒಳಪಡದವರ ಸಂಖ್ಯೆ, ಮೃತರಾದವರ ಮಾಹಿತಿ, ಹೊರದೇಶದಲ್ಲಿ ವಾಸಿಸುವರ ಸಂಖ್ಯೆ, ಚಿಕ್ಕ ಮಕ್ಕಳ ಸಂಖ್ಯೆ ಹೀಗೆ ಹಲವಾರು ಅಂಕಿ-ಅಂಶಗಳನ್ನು ಪ್ರತ್ಯೇಕ ನಮೂನೆಗಳಲ್ಲಿ ದೃಢೀಕರಣ ನೀಡುವಂತೆ ಗಣತಿದಾರರಿಗೆ ಸರ್ಕಾರ ಸೂಚಿಸಿದೆ.
ಸಮೀಕ್ಷೆ ಕಾರ್ಯ ಸರ್ಕಾರದ ಕೆಲಸವಾಗಿದ್ದರಿಂದ ಎಷ್ಟೇ ತೊಡಕು ಇದ್ದರೂ ನಿಭಾಯಿಸಿದ್ದೇವೆ. ಸಮೀಕ್ಷೆಗೆ ಸಂಬಂಧಿಸಿದಂತೆ ಆ್ಯಪ್ನ ಸಮಸ್ಯೆ ಇದ್ದರೂ ಯುಎಚ್ಐಡಿ ಮ್ಯಾಪ್ ಮೂಲಕ ಕುಟುಂಬಗಳ ಗುರುತಿಸಿದ್ದೇವೆ. ಮನೆಗಳ ಪಟ್ಟಿ ನೀಡಿಲ್ಲ. ನ್ಯಾವಿಗೇಷನ್ ಸರಿಯಾಗಿ ಕೊಟ್ಟಿಲ್ಲ. ಸರಿಯಾಗಿ ಬ್ಲಾಕ್ ಹಂಚಿಕೆಯನ್ನೂ ಮಾಡಿಲ್ಲ. ಇಂತಹ ಅನೇಕ ಸಮಸ್ಯೆ ನಡುವೆಯೂ ಜಿಲ್ಲೆಯ ಎಲ್ಲ ಶಿಕ್ಷಕ ಗಣತಿದಾರರು ಸಮೀಕ್ಷೆ ಮಾಡಿದ್ದಾರೆ. 2-3 ಬಾರಿ ಕುಟುಂಬಗಳನ್ನು ಭೇಟಿಯಾಗಿ, ಗಂಟೆಗಟ್ಟಲೆ ಪ್ರಯಾಸಪಟ್ಟು, ಅತ್ಯಂತ ಜಾಗರೂಕತೆಯಿಂದ ಗಣಕೀಕರಣ ಮಾಡಿದ್ದೇವೆ. ಈಗ ಪ್ರತ್ಯೇಕವಾಗಿ ಮಾಹಿತಿ ಕೊಡಿ ಎನ್ನುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಗಣತಿ ತರಬೇತಿ ಅಥವಾ ಗಣತಿ ಆರಂಭದಲ್ಲಿ ನಮಗೆ ಸ್ವಯಂ ದೃಢೀಕರಣ ನಮೂನೆ ಹೊರತು ಪಡಿಸಿ ಯಾವುದೇ ನಮೂನೆ ನೀಡಿಲ್ಲ. ಈ ಮಾಹಿತಿಯನ್ನು ಮೊದಲೇ ತಿಳಿಸಿದ್ದರೆ ಗಣತಿಯ ಸಮಯದಲ್ಲೇ ಸಂಗ್ರಹಿಸುತ್ತಿದ್ದೆವು. ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ನೇತೃತ್ವದಲ್ಲಿ ಈಗಾಗಲೇ ಶೇ.98 ಸಮೀಕ್ಷೆ ಕಾರ್ಯ ನಡೆದಿದೆ. ಇನ್ನು 2 ದಿನದಲ್ಲಿ ಶೇ.100 ಪ್ರಗತಿ ಸಾಧಿಸಲು ಅಗತ್ಯ ಸಹಕಾರ ನೀಡುತ್ತೇವೆ. | ಅಂಪಾರು ದಿನಕರ ಶೆಟ್ಟಿ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ | ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ.ಸಮೀಕ್ಷೆದಾರರು ಆ್ಯಪ್ನಲ್ಲಿ ರೇಷನ್ ಕಾರ್ಡ್ನಲ್ಲಿರುವಂತೆ ಕುಟುಂಬಗಳ ಮಾಹಿತಿ ಭರ್ತಿ ಮಾಡಿದ್ದಾರೆ. ಈಗಾಗಲೇ ಶೇ.89 ಸಮೀಕ್ಷೆ ಕಾರ್ಯ ನಡೆದಿದೆ. ಆದರೆ. ಕೆಲವೊಂದು ಕುಟುಂಬಗಳಲ್ಲಿ ಎಲ್ಲ ಸದಸ್ಯರ ಸರ್ವೇ ಆಗಿಲ್ಲ. ಬಿಟ್ಟು ಹೋಗಿರುವುದೂ ಇದೆ. ಹೀಗಾಗಿ ನಡೆಸಿದ ಸಮೀಕ್ಷೆ ಯಲ್ಲಿ ತಪ್ಪಿ ಹೋಗಿರುವವರ ಮಾಹಿತಿಯ ಅಂಕಿ-ಅಂಶಗಳನ್ನು ಸರಿಪಡಿಸಿ ಕೊಡಬೇಕಿದೆ. ಹೀಗಾಗಿ ಎಲ್ಲ ಗಣತಿದಾರರೂ ತಾವು ಮಾಡಿರುವ ಸಮೀಕ್ಷೆ ಎಲ್ಲವೂ ಸರಿ ಇದೆ ಎಂದು ಧೃಢೀಕರಣ ಪತ್ರವನ್ನೂ ನೀಡಬೇಕು. ನಮ್ಮ ಕುಟುಂಬದ ಸಮೀಕ್ಷೆ ಯನ್ನೇ ಮಾಡಿಲ್ಲ ಎಂದು ಜನರು ದೂರಿದರೆ ಅದಕ್ಕೂ ಸಹ ಸಮೀಕ್ಷೆದಾರರೇ ಹೊಣೆಯಾಗಲಿದ್ದಾರೆ.