

ಬೆಂಗಳೂರು: ರಾಜ್ಯದಲ್ಲಿ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವ ಆಶಯದೊಂದಿಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಜ.23ರಿಂದ 25ರವರೆಗೆ ‘ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025’ ಆಯೋಜಿಸಲಾಗಿದೆ.
ಈ ಮೇಳದ ಕುರಿತು ನಾಗರಿಕರಿಗೆ ಅರಿವು ಮೂಡಿಸಲು ಶುಕ್ರವಾರ (ಜ.10) ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ಟೋ ಜಯಂತಿ ವಿಶ್ವವಿದ್ಯಾಲಯದಲ್ಲಿ ‘ಸಿರಿಧಾನ್ಯಗಳು: ಸುಸ್ಥಿರ ಭವಿಷ್ಯಕ್ಕಾಗಿ ಮಹತ್ವದ ಧಾನ್ಯಗಳು’ ಕುರಿತ ಪ್ಯಾನಲ್ ಚರ್ಚೆ, ಜ.17ರ ಬೆಳಿಗ್ಗೆ 10 ಗಂಟೆಗೆ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ‘ಸಿರಿಧಾನ್ಯಗಳ ಪಾಕಶಾಸ್ತ್ರ’ ವಿಚಾರ ಸಂಕಿರಣ ಹಾಗೂ ಜ.9ರ ಬೆಳಿಗ್ಗೆ 6 ಗಂಟೆಗೆ ಕಬ್ಬನ್ ಪಾರ್ಕ್‌ನಲ್ಲಿ ‘ಸಿರಿಧಾನ್ಯಗಳ ಓಟ’ ಪೂರ್ವಭಾವಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಆಯುಕ್ತರು ತಿಳಿಸಿದ್ದಾರೆ.