

ಬೆಂಗಳೂರು: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ. ಕಲ್ಲಿದ್ದಲು ಕೊರತೆ ಉಂಟಾಗಿದೆ, ವಿದ್ಯುತ್ ಕ್ಷಾಮವಿದೆ ಎಂಬುದು ಶುದ್ಧ ಸುಳ್ಳು ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ನವರು ಸುಳ್ಳು ಸುದ್ದಿ ಹರಡುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೆ ಲೋಡ್ ಶೆಡ್ಡಿಂಗ್ ಆಗುವುದಿಲ್ಲ. ಕಲ್ಲಿದ್ದಲು ಸರಬರಾಜಿನಲ್ಲಿ ಕೊರತೆಯಾಗಿಲ್ಲ. ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಮುಂದಾಲೋಚನೆಯೊಂದಿಗೆ ಸಾಕಷ್ಟು ಎಚ್ಚರಿಕೆ ವಹಿಸಿ ಕಲ್ಲಿದ್ದಲು ದಾಸ್ತಾನಿಗೆ ಆದ್ಯತೆ ನೀಡಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಈಗ ಸೋಲಾರ್ ಹಾಗೂ ಪವನಶಕ್ತಿಯ ಮೂಲದಿಂದ ಲಭಿಸುತ್ತಿದೆ. ಹೀಗಾಗಿ, ವಿದ್ಯುತ್ಕ್ಷಾಮ ಎಂಬ ಕಾಂಗ್ರೆಸ್ ಕಟ್ಟುಕತೆಯಲ್ಲಿ ಅರ್ಥವೇ ಇಲ್ಲ ಎಂದು ಹೇಳಿದರು.
ಬೇಡಿಕೆ ಪೂರೈಸಲು ನಾವು ಸಿದ್ಧ: ರಾಜ್ಯಕ್ಕೆ ಕೇಂದ್ರದಿಂದ ಪ್ರತಿನಿತ್ಯ ಸರಾಸರಿ 13,500 ರಿಂದ 14,500 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಲ್ಲ ವಿದ್ಯುತ್ ಸ್ಥಾವರಗಳ ಬೇಡಿಕೆಗೆ ಅಗತ್ಯವಾದ ಕಲ್ಲಿದ್ದಲು ಇದರಿಂದ ಲಭಿಸುತ್ತಿದೆ. ಈ ದಿನ ರಾಜ್ಯದಲ್ಲಿ 10,400 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ರಾಜ್ಯದ ಇತಿಹಾಸದಲ್ಲೆ ಅತಿ ಹೆಚ್ಚು ಎನ್ನಬಹುದಾದ 14,800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕಳೆದ ಮಾರ್ಚ 21ರಂದು ಎದುರಾಗಿತ್ತು. ಆಗಲೂ ನಮಗೆ ಕಲ್ಲಿದ್ದಲು ಕೊರತೆ ಉಂಟಾಗಿರಲಿಲ್ಲ. ಪೂರೈಕೆಯಲ್ಲಿ ಅಡಚಣೆಗಳು ಆಗಿರಬಹುದು. ಆದರೆ, ಸಾಮಾನ್ಯ ಬೇಡಿಕೆಯ ದಿನದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಲು ಹೇಗೆ ಸಾಧ್ಯ? ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಪ್ರಶ್ನಿಸಿದರು.
ಶಾಖೋತ್ಪನ್ನ ಘಟಕ ಉತ್ಪಾದನೆ ಸ್ಥಗಿತ: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಪಂಪ್ ಸೆಟ್ಗಳಿಗೆ ಅಗತ್ಯವಾದ ವಿದ್ಯುತ್ ಬೇಡಿಕೆ ಪ್ರಮಾಣ ಕುಗ್ಗಿದೆ. ಬೇಡಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಳ್ಳಾರಿ ಹಾಗೂ ರಾಯಚೂರು ಶಾಖೋತ್ಪನ್ನ ಘಟಕದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆಯೇ ಹೊರತು ಕಲ್ಲಿದ್ದಲು ಕೊರತೆಗಾಗಿ ಅಲ್ಲ. ರಾಜ್ಯದಲ್ಲಿ ಪ್ರತಿನಿತ್ಯ 7000 ಮೆಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಬೇಸಿಗೆಯಲ್ಲಿ ವಿದ್ಯುತ್ ಕೊರತೆಯ ಪ್ರಶ್ನೆಯೇ ಉದ್ಭವಿಸದು ಎಂದರು.
ಯುಪಿಎಗಿಂತ ಹೆಚ್ಚು ಕಲ್ಲಿದ್ದಲು ಪೂರೈಕೆ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 2004ರಿಂದ 2014ರ ಅವಧಿಯಲ್ಲಿ 725 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ರಾಜ್ಯಕ್ಕೆ ಪೂರೈಕೆಯಾಗಿತ್ತು. ಆದರೆ, 2015 ರಿಂದ 2022ರ ಅವಧಿಯಲ್ಲಿ 792 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ರಾಜ್ಯದ ವಿದ್ಯುತ್ ಹಿತಾಸಕ್ತಿ ಕಾಪಾಡುವುದಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಕಲ್ಲಿದ್ದಲು ಪೂರೈಕೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.
ಕತ್ತಲೆ ಭಾಗ್ಯದ ದಿನ ಜನ ಮರೆತಿಲ್ಲ: ಸಿದ್ದರಾಮಯ್ಯ ಸರ್ಕಾರದಲ್ಲಿ ರಾಜ್ಯಕ್ಕೆ ನೀಡಿದ್ದ ಕತ್ತಲೆ ಭಾಗ್ಯದ ರ್ದುದಿನಗಳನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ. ಅಪಪ್ರಚಾರ ನಡೆಸುವಾಗ ಕಾಂಗ್ರೆಸಿಗರು ಹತ್ತು ಬಾರಿ ಯೋಚಿಸಿ ಅಡಿ ಇಡಲಿ ಎಂದು ವ್ಯಂಗ್ಯವಾಡಿದರು.