

ಲಕ್ಷ್ಮೇಶ್ವರ: ಮಳೆಗಾಲ ಬಂದರೆ ಪಟ್ಟಣದಲ್ಲಿ ರಸ್ತೆಗಳ ಪರಿಸ್ಥಿತಿ ಅಯೋಮಯವಾಗುತ್ತದೆ. ಅನೇಕ ವರ್ಷಗಳಿಂದ ಸುಧಾರಣೆ ಕಾಣದೆ ಸವಾರರು ಹೈರಾಣಾಗುತ್ತಿದ್ದಾರೆ.
ಪಟ್ಟಣದ ಬಹುತೇಕ ರಸ್ತೆಗಳಲ್ಲಿ ತಗ್ಗು ಗುಂಡಿಗಳು ತುಂಬಿವೆ. ಅನೇಕ ರಸ್ತೆಗಳಲ್ಲಿ ಪೈಪ್ಲೈನ್ಗಾಗಿ ತೆಗೆದಿರುವ ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚಲಾಗಿದೆ. ರಸ್ತೆಗಳ ಬದಿಯಲ್ಲಿರುವ ಸಂಪರ್ಕ ರಸ್ತೆಯ ಚರಂಡಿ ಮೇಲಿರುವ ಸಿಡಿ.ಗಳು ಅಲ್ಲಲ್ಲಿ ಕುಸಿದಿವೆ. ಅನೇಕ ರಸ್ತೆಗಳು ಮಧ್ಯದಲ್ಲಿ ಕುಸಿದು ಓಡಾಟಕ್ಕೆ ತೊಂದರೆಯಾಗಿದೆ.
ಕೆಲ ರಸ್ತೆಗಳು ಸುಧಾರಣೆಗೊಳ್ಳುತ್ತಿದ್ದರೂ, ಗುಣಮಟ್ಟದ ಕಾಮಗಾರಿಯಾಗುತ್ತಿಲ್ಲ ಎನ್ನುವ ದೂರುಗಳು ಸಾಮಾನ್ಯ. 6-7 ವರ್ಷಗಳ ಹಿಂದೆ ಒಳಚರಂಡಿ ಯೋಜನೆಗಾಗಿ ರಸ್ತೆಗಳನ್ನು ಅಗೆದಾಗಿನಿಂದ ದುರಸ್ತಿ ಕಾಣದೆ ತಗ್ಗು ಗುಂಡಿಗಳು ನಿರ್ವಣವಾಗಿವೆ. ರಸ್ತೆ ಮಧ್ಯೆಯೇ ಚರಂಡಿಯ ಬಾಕ್ಸ್ಗಳು ಬಾಯ್ದೆರೆದಿವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರಿನ ಗುಂಡಿಗಳಿಂದ ಕೆಸರು, ಬೇಸಿಗೆಯಲ್ಲಿ ಧೂಳಿನ ಮಜ್ಜನ ಜನರಿಗಾಗುತ್ತಿದೆ.
ರಸ್ತೆ, ಒಳಚರಂಡಿ ಬಾಕ್ಸ್ಗಳು, ಸಿ.ಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪುರಸಭೆ ಗಮನಹರಿಸಿಲ್ಲ. ಕೆಲವೊಂದು ಭಾಗಗಳಲ್ಲಿ ಬೀದಿದೀಪಗಳು ಉರಿಯದೆ ಇರುವುದರಿಂದ ರಸ್ತೆಗಳಲ್ಲಿರುವ ತಗ್ಗು ಗುಂಡಿಗಳು ಕಾಣದಂತಾಗಿ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಮಳೆಯಾದರೆ ರಸ್ತೆಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರು, ಮಕ್ಕಳು, ವೃದ್ಧರು ಭಯದಲ್ಲಿಯೇ ಸಾಗುವಂತಾಗಿದೆ. ಗುಂಡಿಗಳು ಕಾಣದೆ ವಾಹನ ಸವಾರರು ಜಾರಿಬಿದ್ದ ಉದಾಹರಣೆಗಳಿವೆ.
ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳನ್ನು ಸಂರ್ಪಸದರೆ, ಅನುದಾನ ಬಂದ ತಕ್ಷಣ ರಸ್ತೆ ಸುಧಾರಣೆ ಕೈಗೆತ್ತಿಕೊಳ್ಳಲಾಗುವುದು ಎಂಬ ಉತ್ತರ ನೀಡುತ್ತಾರೆ. ಪುರಸಭೆ ತಕ್ಷಣ ಕ್ರಮಕ್ಕೆ ಮುಂದಾಗಬೇಕೆಂದು ಜನರು ಆಗ್ರಹಿಸಿದ್ದಾರೆ.