

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಕಳೆದ ಹದಿನೈದು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಅಪಾಯದಲ್ಲೇ ಸಂಚರಿಸುವಂತಾಗಿದೆ.
ತಾಲೂಕಿನ ಚಳಗೇರಿ, ಕಮದೋಡ, ಹನುಮನಮಟ್ಟಿ, ಕಾಕೋಳ ಹಾಗೂ ಹಾವೇರಿ ಸೇತುವೆ ಬಳಿ ರಸ್ತೆಯಲ್ಲಿ ಗುಂಡಿ ಬಿದ್ದಿರುವ ಪರಿಣಾಮ ನಿತ್ಯ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಪುಣೆ-ಬೆಂಗಳೂರುವರೆಗೂ ಸಂಪರ್ಕ ಕಲ್ಪಿಸಲು ಇದು ಮುಖ್ಯ ರಸ್ತೆಯಾಗಿರುವುದರಿಂದ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಹೊಂಡಗಳಿಂದಾಗಿ ಸವಾರರಿಗೆ ವಾಹನ ಚಲಾಯಿಸುವುದು ನರಕಯಾತನೆಯಾಗಿದೆ.
ಚಳಗೇರಿ ಹಾಗೂ ಕಮದೋಡ ಬಳಿ ಬಿದ್ದಿರುವ ಗುಂಡಿ ವಾಹನ ಸವಾರರಿಗೆ ಸರಿಯಾಗಿ ಕಾಣುತ್ತಿಲ್ಲ. ರಾಣೆಬೆನ್ನೂರ ಕಡೆಯಿಂದ ಹರಿಹರ ಕಡೆಗೆ ವೇಗವಾಗಿ ಬರುವ ವಾಹನ ಸವಾರರು ಗುಂಡಿ ನೋಡಿ ತಕ್ಷಣ ಬ್ರೆಕ್ ಹಾಕಲು ಮುಂದಾಗುತ್ತಾರೆ. ಈ ವೇಳೆ ಹಿಂಭಾಗದಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಬಹಳಷ್ಟು ಅಪಘಾತಗಳು ಸಂಭವಿಸುತ್ತಿವೆ.
ಗುಂಡಿಯ ಸ್ಥಳದಲ್ಲಿ ಬಹಳಷ್ಟು ಬಾರಿ ಇಂತಹ ಘಟನೆಗಳು ಸಂಭಸುತ್ತಲೇ ಇವೆ. ಇದು ನಿತ್ಯ ಸಂಚರಿಸುವ ವಾಹನ ಸವಾರರಿಗೆ ಬಹಳಷ್ಟು ಕಿರಿಕಿರಿ ಮಾಡುತ್ತಿವೆ. ಹಲವು ಬೈಕ್ ಸವಾರರು ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಯೂ ಇದೆ.
ಈ ರಸ್ತೆಗೆ ಹಲವು ಬಾರಿ ತೇಪೆ ಹಾಕಿದರೂ ಪದೇಪದೆ ಗುಂಡಿ ಬೀಳುತ್ತಲೇ ಇರುತ್ತವೆ. ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಗುಂಡಿ ಮುಚ್ಚಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.
ಚಳಗೇರಿ, ಕಮದೋಡದ ಬಳಿ ನೀರು ಸರಾಗವಾಗಿ ಚರಂಡಿಗೆ ಹರಿಯಲು ವ್ಯವಸ್ಥೆ ಇಲ್ಲದ ಕಾರಣ, ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಚರಂಡಿಗನುಗುಣವಾಗಿ ರಸ್ತೆ ಕಾಮಗಾರಿ ಮಾಡದಿರುವುದರಿಂದ ನೀರು ರಸ್ತೆ ಮೇಲೆ ನಿಲ್ಲುತ್ತಿದ್ದು, ತಕ್ಷಣ ಅಧಿಕಾರಿಗಳು ಸಮಸ್ಯೆ ಸರಿಪಡಿಸಬೇಕಿದೆ.
ರಸ್ತೆ ಮೇಲೆ ಅಲ್ಲಲ್ಲಿ ಉಬ್ಬುಗಳನ್ನು ನಿರ್ಮಾಣ ಮಾಡಲಾಗಿದ್ದು, ಮಳೆಯಾದರೆ ಉಬ್ಬುಗಳಂಚಿನಲ್ಲಿ ಅತಿಯಾದ ನೀರು ನಿಲ್ಲುತ್ತಿದೆ. ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಮಾಡದ ಕಾರಣ ಜನಸಾಮಾನ್ಯರು, ವಾಹನ ಸವಾರರು ನಿರಂತರವಾಗಿ ತೊಂದರೆ ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಎನ್ಎಚ್-48ನಲ್ಲಿ ವಾಹನಗಳು 100 ಕಿ.ಮೀ. ವೇಗದಲ್ಲಿ ಓಡಾಡುತ್ತಿರುತ್ತವೆ. ಆದರೆ, ಏಕಾಏಕಿ ಗುಂಡಿ ಕಂಡು ಬಂದಾಗ ವಾಹನ ನಿಲ್ಲಿಸಲಾಗದೆ ಗುಂಡಿಯಲ್ಲಿ ಬೀಳಬೇಕಾದ ದುಸ್ಥಿತಿ ಬರುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕು. | ಸುರೇಶ ಶ್ಯಾಡಂಬಿ, ಕಾರು ಚಾಲಕ ಮಳೆಯಿಂದ ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹಾವೇರಿ ಕಡೆಯಿಂದ ಮಾಡುತ್ತ ಬರುತ್ತಿದ್ದಾರೆ. ಎರಡ್ಮೂರು ದಿನದಲ್ಲಿ ಎಲ್ಲ ಗುಂಡಿಗಳನ್ನು ಮುಚ್ಚಲಾಗುವುದು. | ಉಮಾಪತಿ, ಎನ್ಎಚ್-48 ರೆಸಿಡೆನ್ಸಿಯಲ್ ಇಂಜಿನಿಯರ್