

ಯಲ್ಲಾಪುರ: ಜೋರಾದ ಮಳೆಯ ಪರಿಣಾಮ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ಗೋಡೆ ಕುಸಿಯಲಾರಂಭಿಸಿದೆ.
ಮಂಗಳವಾರ ರಾತ್ರಿ ಶಾಲೆಯ ವರಾಂಡದಲ್ಲಿ ಗೋಡೆ ಇಟ್ಟಿಗೆಗಳು ಕುಸಿದು ಬಿದ್ದಿವೆ. ಶಾಲೆಗೆ ಹೊಸ ಕಟ್ಟಡ ಇದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಳೆಯ ಕಟ್ಟಡದಲ್ಲೂ ತರಗತಿ ನಡೆಸಲಾಗುತ್ತಿತ್ತು.
ರಾತ್ರಿ ವೇಳೆ ಗೋಡೆ ಕುಸಿಯಲಾರಂಭಿಸಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಬುಧವಾರ ಮಕ್ಕಳನ್ನು ಹೊಸ ಕಟ್ಟಡದಲ್ಲೇ ಕೂರಿಸಿ ಪಾಠ ಮಾಡಲಾಗುತ್ತಿದೆ.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ, ಸಿ.ಆರ್.ಪಿ ಸಂಜೀವಕುಮಾರ ಹೊಸ್ಕೇರಿ ಭೇಟಿ ನೀಡಿ ಪರಿಶೀಲಿಸಿದರು. ಹಳೆಯ ಕಟ್ಟಡದಲ್ಲಿ ತರಗತಿ ನಡೆಸದಂತೆ ಶಿಕ್ಷಕರಿಗೆ ಸೂಚಿಸಿದರು.
ರಸ್ತೆ ಮೇಲೆ ಹರಿಯುವ ಮಳೆ ನೀರು: ತಾಲೂಕಿನಲ್ಲಿ ಕಳೆದ 2-3 ದಿವಸಗಳಿಂದ ಜೋರಾಗಿ ಮಳೆ ಸುರಿಯುತ್ತಿದ್ದು, ಬುಧವಾರವೂ ಮುಂದುವರಿದಿದೆ.
ಗ್ರಾಮೀಣ ಭಾಗದಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗಾಳಿ-ಮಳೆಯಿಂದಾಗಿ ವಿದ್ಯುತ್ ಅವ್ಯವಸ್ಥೆ ಮುಂದುವರಿದಿದೆ. ಪಟ್ಟಣ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಗಟಾರ ಸ್ವಚ್ಛತೆ ಮಾಡದೇ ಇರುವುದರಿಂದ ಮಳೆಯ ನೀರು ರಸ್ತೆಯ ಮೇಲೆ ಹರಿದು ಸಮಸ್ಯೆ ಉಂಟಾಗುತ್ತಿದೆ.
ಪಟ್ಟಣದ ಬೆಲ್ ರಸ್ತೆ, ತಟಗಾರ ಕ್ರಾಸ್ ಬಳಿ ಹೆದ್ದಾರಿಯಲ್ಲಿ, ನಾಯಕನಕೆರೆ ಸೇರಿದಂತೆ ಹಲವೆಡೆ ತೊಂದರೆಯಾಗುತ್ತಿದೆ.
15 ನಿಮಿಷ ಜೋರಾಗಿ ಮಳೆ ಸುರಿದರೂ ಗಟಾರ ತುಂಬಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ.