

ಮುಂಡಗೋಡ: ಅರಣ್ಯವು ಜನರ ಜೀವನದ ಅಸ್ತಿತ್ವ ಹಾಗೂ ಜೀವಜಲದ ಮೂಲಗಳಾಗಿವೆ. ಮಾಲಿನ್ಯಮುಕ್ತ ಪರಿಸರ ಅಗತ್ಯವಾಗಿದ್ದು ಅರಣ್ಯದ ಉಳಿವು ಅತಿ ಅವಶ್ಯ ಎಂದು ಎಸಿಎಫ್ ರವಿ ಹುಲಕೋಟಿ ಹೇಳಿದರು.
ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಪಟ್ಟಣದ ಮರಮಟ್ಟು ಸಂಗ್ರಹಾಲಯಕ್ಕೆ ಗುರುವಾರ ಆಗಮಿಸಿದ್ದ ತಾಲೂಕಿನ ಮಳಗಿಯ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪರಿಸರದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಪ್ರತಿಯೊಬ್ಬರನ್ನು ಭವಿಷ್ಯದ ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುವುದು ವನದರ್ಶನ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಕಾಡು, ಪ್ರಾಣಿ, ಪಕ್ಷಿಗಳು ಉಳಿದರೆ ಮಾತ್ರ ಮನುಷ್ಯ ಜೀವಿಸಲು ಸಾಧ್ಯ. ವಿದ್ಯಾರ್ಥಿಗಳು ಪರಿಸರ ರಕ್ಷಕರಾಗಿ ಕೆಲಸ ಮಾಡಲು ಈಗಿಂದಲೇ ಪ್ರಾಣಿ, ಪಕ್ಷಿ, ಗಿಡ, ಮರಗಳ ಮಹತ್ವ ಅರಿಯಬೇಕು ಎಂದರು.
ನಂತರ ಪಕ್ಷಿಗಳು, ಅವುಗಳ ಸಂತಾನೋತ್ಪತ್ತಿ ಕ್ರಿಯೆ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳನ್ನು ಅತ್ತಿವೇರಿ ಪಕ್ಷಿಧಾಮಕ್ಕೆ ಕರೆದುಕೊಂಡು ಹೋಗಲಾಯಿತು. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಪಕ್ಷಿಗಳನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ವನ ದರ್ಶನಕ್ಕೆ ಬಂದಿದ್ದ ವಿದ್ಯಾರ್ಥಿಗಳಿಗೆ ಮರಗಳ ವಿಶೇಷತೆ, ಅವುಗಳ ಉಪಯೋಗ, ಬಾಳಿಕೆಯ ಅವಧಿ ಮತ್ತಿತರ ವಿಷಯಗಳನ್ನು ಮಕ್ಕಳಿಗೆ ವಿವರಿಸಲಾಯಿತು. ಮಕ್ಕಳಿಗೆ ಬ್ಯಾಗ್, ಕ್ಯಾಪ್, ನೋಟ್‌ಬುಕ್ ಕಿಟ್‌ಗಳನ್ನು ನೀಡಲಾಯಿತು.
ಕಾತೂರ ಆರ್‌ಎಫ್‌ಒ ವೀರೇಶ ಹಾಗೂ ಮರಮಟ್ಟು ಸಂಗ್ರಹಾಲಯದ ಅಧಿಕಾರಿಗಳಿದ್ದರು.