ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಒಡೆದು ಆಳುವ ನೀತಿ

Published on

ಮಂಗಳೂರು: ಮುಸ್ಲಿಮರಿಗೆ ಕಾಮಗಾರಿ ಗುತ್ತಿಗೆಗಳಲ್ಲಿ ಶೇ.4ರ ಮೀಸಲು ನೀಡುವ ಮೂಲಕ ರಾಜ್ಯ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಕೂಡಲೇ ವಾಪಸ್ ಪಡೆಯಬೇಕು. ಅಲ್ಲದೆ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನಾಡಿ ನಾಡಿನ ಜನತೆಯ ಕ್ಷಮೆ ಕೋರಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಏನೂ ಮಾಡದೆ ನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನತೆಗೆ ಹೊರೆ ನೀಡಿದೆ. ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ದಲಿತದ ಅಭಿವೃದ್ಧಿಗೆ ಮೀಸಲಿಟ್ಟ ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸುವ ಮೂಲಕ ಅನ್ಯಾಯ ಮಾಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ದಲಿತ ಮೀಸಲು ನಿಧಿ 42 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ ಎನ್ನುತ್ತಿದ್ದಾರೆ. ವಾಸ್ತವದಲ್ಲಿ ಇದರಲ್ಲಿ ಶೇ.50ರಷ್ಟು ಮೊತ್ತ ಆಯಾ ಇಲಾಖೆಗಳಿಗೆ ಹೋಗುತ್ತದೆ, ಉಳಿದ 21 ಸಾವಿರ ಕೋಟಿ ರು.ಗಳಲ್ಲಿ 14 ಸಾವಿರ ಕೋಟಿ ರೂ. ಗ್ಯಾರಂಟಿಗೆ, ಉಳಿಕೆಯಾಗುವುದು ಕೇವಲ 7 ಸಾವಿರ ಕೋಟಿ ರು. ಮಾತ್ರ. ಈ ಮೊತ್ತದಲ್ಲಿ ದಲಿತರ ಉದ್ಧಾರ ಹೇಗೆ ಸಾಧ್ಯ ಎಂದರು.

ಶಾಸಕ ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಪ್ರತಾಸ್‌ಪಿಂಹ ನಾಯಕ್, ಕಿಶೋರ್ ಕುಮಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಸುಲೋಚನಾ ಭಟ್, ಶಿಲ್ಪಾ ಸುವರ್ಣ, ರಾಜೇಶ್, ಸತೀಶ್ ಆರ್ವಾರ್, ಪೂಜಾ ಪೈ, ಆರ್.ಸಿ.ನಾರಾಯಣ್, ಸಂಜಯ ಪ್ರಭು ಮತ್ತಿತರರಿದ್ದರು.

-------------

ಸರ್ಕಾರದ ತಪ್ಪು ನಿರೂಪಿಸಲು ಅವಕಾಶ ಇದೆ

ಅಧಿವೇಶದಲ್ಲಿ ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಮಾತನಾಡಿದ 18 ಮಂದಿ ಬಿಜೆಪಿ ಶಾಸಕರನ್ನೇ ಅಮಾನತುಗೊಳಿಸಿದ್ದಾರೆ. ಕನಿಷ್ಠ ಒಂದೆರಡು ತಿಂಗಳು ಅಮಾನತು ಸರಿ, ಇದು ಆರು ತಿಂಗಳ ಕಾಲ ಅಮಾನತುಗೊಳಿಸುವುದು ಎಷ್ಟು ಸರಿ. ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಬಾಗಿಲು ಒದ್ದು ಅಸೆಂಬ್ಲಿ ಪ್ರವೇಶಿಸಿದ್ದರು. ಅಸೆಂಬ್ಲಿಯಲ್ಲೂ ಗಲಾಟೆ ಎಬ್ಬಿಸಿದ್ದರು. ಆಗ ನಾವು ಸಣ್ಣ ಪ್ರಮಾಣದಲ್ಲಿ ಕ್ರಮ ಕೈಗೊಂಡಿದ್ದೆವು. ಸರ್ಕಾರದ ತಪ್ಪುಗಳನ್ನು ಹೇಳಲು ಪ್ರತಿಯೊಬ್ಬರಿಗೂ ಅವಕಾಶ ಇದೆ. ಸಮಾಜಸೇವಕರು, ರಾಜಕಾರಣಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಕೈ, ಬಾಯಿ, ಕಚ್ಚೆ ಸರಿಯಾಗಿಟ್ಟುಕೊಂಡರೆ ನಾವು ದೇವರಿಗೂ ಹೆದರಬೇಕಾಗಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net