ದರೋಡೆಕೋರನ ಕಾಲಿಗೆ ಪೊಲೀಸರ ಗುಂಡು

h23-Vinod gudyal
Published on

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸ್ ಪಿಸ್ತೂಲ್ ಸದ್ದು ಮಾಡಿದ್ದು, ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆಕೋರನ ಕಾಲಿಗೆ ಬೆಂಡಿಗೇರಿ ಠಾಣೆಯ ಪೊಲೀಸರು ನಗರ ಹೊರವಲಯದ ತಾರಿಹಾಳ ಸೇತುವೆ ಬಳಿ ಸೋಮವಾರ ಗುಂಡು ಹಾರಿಸಿದ್ದಾರೆ.
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿನೋದ ಗುಡ್ಯಾಳ ಎಂಬಾತನನ್ನು ಬೆಂಡಿಗೇರಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ್ ನೇತೃತ್ವದ ತಂಡ ಬಂಧಿಸಿತ್ತು. ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ. ಪ್ರಕರಣವೊಂದರ ವಿಚಾರಣೆ ನಡೆಸುವ ಸಂಬಂಧ ತಾರಿಹಾಳ ಸೇತುವೆ ಬಳಿ ಸ್ಥಳ ಮಹಜರು ಮಾಡುವ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಪಿಎಸ್‌ಐ ಜಯಶ್ರೀ ಚಲುವಾದಿ ತಮ್ಮ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಬಳಿಕ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಪಿಎಸ್‌ಐ ಜಯಶ್ರೀ ಹಾಗೂ ಪೇದೆ ರಮೇಶ ಹಿತ್ತಲಮನಿ ಅವರಿಗೂ ಗಾಯಗಳಾಗಿವೆ. ಆರೋಪಿ ಸಹಿತಿ ಮೂವರನ್ನು ಕೆಎಂಸಿಆರ್‌ಸಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ವಿನೋದ ತಂಡ ಕಟ್ಟಿಕೊಂಡು ಕಳ್ಳತನ, ಬೆದರಿಕೆ ಸೇರಿ ವಿವಿಧ ಕೃತ್ಯಗಳಲ್ಲಿ ತೊಡಗಿದ್ದ. ಹು-ಧಾ ಮಾತ್ರವಲ್ಲದೇ ಗದಗ, ಹಾವೇರಿ, ಬಾಗಲಕೋಟ ಸೇರಿ ಇತರೆಡೆ ದರೋಡೆ ಕೃತ್ಯ ನಡೆಸಿರುವ ಮಾಹಿತಿ ಇದೆ. ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ವಿನೋದ ಕಾಲಿಗೆ ನಮ್ಮ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಇನ್ನಷ್ಟು ತನಿಖೆ ನಡೆಸಲಾಗುವುದು’ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net