

ದೊಡ್ಡಬಳ್ಳಾಪುರ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಅಪಘಾತಕ್ಕೆ ಒಳಗಾಗಿದೆ.
ತುಮಕೂರು ಜಿಲ್ಲೆ ಪಾವಗಡದಲ್ಲಿ ಬಸ್ ಅಪಘಾತಕ್ಕೀಡಾಗಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಮಾಜಿ ಸಿಎಂ ಎಚ್ಡಿಕೆ ತೆರಳುತ್ತಿದ್ದ ಮಾರ್ಗಮಧ್ಯೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಬೆಂಗಾವಲು ವಾಹನದಲ್ಲಿದ್ದ ಸಿಬ್ಬಂದಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಾವಗಡ ಬಸ್ ದುರಂತದಲ್ಲಿನ ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಎಚ್ಡಿಕೆ ದೊಡ್ಡಬಳ್ಳಾಪುರ ಮಾರ್ಗವಾಗಿ ಮಧ್ಯಾಹ್ನ ತುಮಕೂರಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ನಗರದ ಡೇರಿ ಸರ್ಕಲ್ ಮುಂಭಾಗ ಎಚ್ಡಿಕೆ ಮುಂದೆ ಹೋಗುತ್ತಿದ್ದರು. ಅವರ ಹಿಂದೆ ಬೆಂಗಾವಲು ಪಡೆ ಬರುತ್ತಿತ್ತು. ಈ ವೇಳೆ ಎದುರುಗಡೆಯಿಂದ ವಾಹನವೊಂದು ಅಡ್ಡಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಬೆಂಗಾವಲು ವಾಹನ ಚಾಲಕ ಬಲಭಾಗಕ್ಕೆ ತಿರುಗಿಸಿದ್ದಾರೆ. ಪರಿಣಾಮ ರಸ್ತೆಬದಿ ಎರಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಾಹನದಲ್ಲಿದ್ದ ಬೆಂಗಾವಲು ಸೇವೆಯ ಐವರು ಪೊಲೀಸ್ ಸಿಬ್ಬಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಉಳಿದಂತೆ ಹೆಚ್ಚಿನ ಅನಾಹುತ ಆಗಿಲ್ಲ ಎಂದು ತಿಳಿದು ಬಂದಿದೆ.
ಘಟನೆಯಿಂದ ಎಚ್ಡಿಕೆ ಕೂಡ ಶಾಕ್ಗೆ ಒಳಗಾಗಿದ್ದರು. ಬಳಿಕ ಹೆಚ್ಚಿನ ಅವಘಡ ಸಂಭವಿಸದೇ ಇದ್ದ ಕಾರಣ ತುಮಕೂರಿಗೆ ಪ್ರಯಾಣ ಬೆಳೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇನ್ನು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲ ಗಂಟೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.