

ಬೆಂಗಳೂರು: ಜನಪ್ರಿಯ ವಿಡಿಯೋ ಶೇರಿಂಗ್ ಆ್ಯಪ್ ಆಗಿ ಬೆಳೆಯುತ್ತಿರುವ ರೊಪೊಸೊ ಸಂಸ್ಥೆಗೆ ಸಂಕಷ್ಟ ಎದುರಾಗಿದೆ.
ಹೌದು, ರೊಪೊಸೊ ಸಂಸ್ಥೆ ಕಾಪಿರೈಟ್ಸ್ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಪ್ರಸಿದ್ದ ಮ್ಯುಸಿಕ್ ಸಂಸ್ಥೆಯಾದ ಲಹರಿ ಮ್ಯುಸಿಕ್ ಕಂಪೆನಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಲಹರಿ ಸಂಸ್ಥೆಯ ಹಾಡುಗಳನ್ನ ಅನುಮತಿಯಲ್ಲದೆ ಬಳಕೆ ಆರೋಪದ ಮೇಲೆ ಯಶವಂತಪುರ ಠಾಣಾ ಪೊಲೀಸರಿಂದ ಗ್ಲ್ಯಾನ್ಸ್ (ರೊಪೊಸೊ ಮಾತೃ ಸಂಸ್ಥೆ) ಕಂಪನಿಗೆ ನೊಟಿಸ್ ನೀಡಲಾಗಿದೆ. ಅನುಮತಿಯಿಲ್ಲದೇ ಲಹರಿ ಸಂಸ್ಥೆಯ ಒಡೆತನದ ಹಾಡುಗಳನ್ನ ತನ್ನ ಬಳಕೆದಾರರಿಗೆ ನೀಡಿರುವ ಆರೋಪವನ್ನು ರೊಪೊಸೊ ಎದುರಿಸುತ್ತಿದೆ.
ಈ ಕುರಿತು ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣವನ್ನು ಲಹರಿ ಮ್ಯುಸಿಕ್ ಮುಖ್ಯಸ್ಥ ಲಹರಿ ವೇಲು ಅವರು ದಾಖಲಿಸಿದ್ದರು. ಹೀಗಾಗಿ ಬೆಳ್ಳಂದೂರಿನ ಗ್ಲ್ಯಾನ್ಸ್ ಕಂಪನಿ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಸರ್ವರ್ಗಳನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದರು. ಆದರೆ, ರೊಪೊಸೊ ತನ್ನ ಸರ್ವರ್ ಗಳನ್ನ ಬಳಸಲು ಅನುಮತಿ ನೀಡದ ಹಿನ್ನೆಲೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.