

ಬೆಂಗಳೂರು: ಕರೊನಾ ಸೋಂಕಿನಿಂದ ನಿನ್ನೆ ವಿಧಿವಶರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು (ಜೂ.12) ಮಧ್ಯಾಹ್ನ ಕಲಾಗ್ರಾಮದಲ್ಲಿ ಬೌದ್ಧ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೇರಲಿದೆ.
ಇದಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಆವರಣದಲ್ಲಿ ಸಿದ್ದಲಿಂಗಯ್ಯನವರ ಅಂತಿಮ ದರ್ಶನ ಪಡೆಯಲು ಸಾರ್ವಜನಕಿರಿಗೆ ಅವಕಾಶ ಕಲ್ಪಿಸಲಾಗಿತ್ತು. ಬುದ್ಧನ ಪ್ರತಿಮೆ ಅಡಿ ಸಿದ್ದಲಿಂಗಯ್ಯನವರ ಪಾರ್ಥಿವ ಶರೀರವನ್ನು ಇಟ್ಟು, ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೋವಿಡ್ ಮಾರ್ಗಸೂಚಿ ಪಾಲಿಸಲಾಗಿದ್ದು, ನೂರಾರು ಜನರು ಸರದಿ ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಂಸದ ಡಿಕೆ ಸುರೇಶ್, ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ, ಬೆಂಗಳೂರು ವಿವಿ ಕುಲಪತಿ ಕೆ.ಆರ್. ವೇಣುಗೋಪಾಲ್, ಕುಲಸಚಿವರಾದ ಕೆ.ಜ್ಯೋತಿ, ಡಾ.ದೇವರಾಜ್, ಐಎಎಸ್ ಅಧಿಕಾರಿ ಕುಮಾರನಾಯ್ಕ ಸೇರಿದಂತೆ ಹಲವು ಸಿದ್ದಲಿಂಗಯ್ಯರ ಅಂತಿಮ ದರ್ಶನ ಪಡೆದರು.