

ವಿಜಯಪುರ: ಸರ್ವಜ್ಞ ಜನರ ಮಧ್ಯೆ ಬದುಕಿದ ಜನ ಸಾಮಾನ್ಯರ ಕವಿ. ತ್ರಿಪದಿಗಳ ಮೂಲಕ ಅತ್ಯಂತ ಸರಳವಾಗಿ ತತ್ವಾದರ್ಶಗಳನ್ನು ನೀಡಿದ್ದಾರೆ. ಅವರ ವಚನಗಳ ಸಾರವನ್ನು ಅರಿತು ಅನುಸರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಮಂಗಳವಾರ ಹಮ್ಮಿಕೊಂಡ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಡುಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ವಿಷಯಗಳಿಲ್ಲ. ಕೃಷಿ, ಸಂಸಾರ, ಅನಿಷ್ಠ ಪದ್ಧತಿ, ಸಮಾಜದ ಪರಿಕಲ್ಪನೆ ಹೀಗೆ ಅನೇಕ ವಿಷಯಗಳ ಮೇಲೆ ತ್ರಿಪದಿಗಳನ್ನು ರಚಿಸಿದ್ದಾರೆ. ಮೂರೇ ಸಾಲಿನಲ್ಲಿ ಅಗಾಧವಾದ ಸಂದೇಶ ಕೊಡುವ ವಚನಗಳನ್ನು ರಚಿಸಿ ಈ ನಾಡಿಗೆ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ ಎಂದು ಹೇಳಿದರು.
ಹೊನ್ನುಟಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಕುಂಬಾರ ಉಪನ್ಯಾಸ ನೀಡುತ್ತಾ, ಸರ್ವರೊಳಗೊಂದು ನುಡಿಯ ಕಲಿತು ವಿದ್ಯೆಯ ಪರ್ವತವೇ ಆದವರು ಸರ್ವಜ್ಞ. ಅವರು ಜನರ ಮಧ್ಯೆ ಬೆರೆತ ಕವಿ. ಇಂದಿಗೂ ಜನ ಸಾಮಾನ್ಯರ ನಾಲಿಗೆಯ ಮೇಲೆ ಅವರ ವಚನಗಳು ಜನಜನಿತವಾಗಿವೆೆ. ಅನೇಕ ವಿಷಯಗಳ ಮೇಲೆ ತ್ರಿಪದಿಗಳನ್ನು ರಚಿಸಿದ್ದಾರೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಎಸ್.ಎಸ್. ಕುಂಬಾರ ಉಪಸ್ಥಿತರಿದ್ದರು. ಸಂಗೀತಾ ಮಠಪತಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಿದ್ಧೇಶ್ವರ ದೇವಸ್ಥಾನದಿಂದ ಕಂದಗಲ್ಲ ಹನುಮಂತರಾಯ ರಂಗಮಂದಿರದವರೆಗೆ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ತಹಸೀಲ್ದಾರ್ ಕವಿತಾ ಮತ್ತಿತರರಿದ್ದರು.