ಮೈಸೂರಲ್ಲಿ ನಮೋ ಯೋಗ: 15 ಸಾವಿರ ಯೋಗಪಟುಗಳ ಜತೆ ಮೋದಿ

modi
Published on

ಮೈಸೂರು: ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಚಾಲನೆ ಸಿಕ್ಕಿದ್ದು, ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯುತ್ತಿದೆ.

ಮಂಗಳವಾರ ಬೆಳಗ್ಗೆ 7 ಗಂಟೆಗೆ ಶುರುವಾದ ಪ್ರದರ್ಶನ 7.45ರವರೆಗೂ ನಡೆಯಲಿದೆ. ಪ್ರಧಾನಿ ಮೋದಿ ಅವರೊಂದಿಗೆ 15 ಸಾವಿರ ಜನ ಯೋಗ ಮಾಡುತ್ತಿದ್ದು, ಇದರಲ್ಲಿ 1200 ಶಾಲಾ ಮಕ್ಕಳು ಭಾಗವಹಿಸಿದ್ದಾರೆ. 45 ನಿಮಿಷ ನಡೆಯುವ ಯೋಗ ಕಾರ್ಯಕ್ರಮದಲ್ಲಿ 19 ಆಸನಗಳು ಪ್ರದರ್ಶನಗೊಳ್ಳಲಿದ್ದು, ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​, ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​, ಪ್ರಮೋದಾದೇವಿ ಒಡೆಯರ್​, ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​, ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಹಲವು ಗಣ್ಯರು ಮೋದಿ ಅವರ ಜತೆಗೆ ಯೋಗಾ ಮಾಡುತ್ತಿದ್ದಾರೆ.

ಅರಮನೆ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮ ಬೆಳಗ್ಗೆ 6.30ಕ್ಕೆ ಆರಂಭಗೊಳ್ಳಲಿದೆ. ಮೊದಲಿಗೆ ಕೇಂದ್ರ ಆಯುಷ್​ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲಾ 5 ನಿಮಿಷ ಮಾತನಾಡಲಿದ್ದಾರೆ. ಬಳಿಕ 20 ನಿಮಿಷ ಪ್ರಧಾನಿ ನರೇಂದ್ರ ಮೋದಿ ಯೋಗ ಸಂದೇಶ ನೀಡಲಿದ್ದಾರೆ. ಇದಾದ ಬಳಿಕ 7ರಿಂದ 7.45ರವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ. ಇದರಲ್ಲಿ ಮೊದಲ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನ ನಡೆಯಲಿವೆ. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ ಇರಲಿದೆ. ಒಂದು ನಿಮಿಷ ಶಾಂತಿಮಂತ್ರ, ಎರಡು ನಿಮಿಷ ಸಂಕಲ್ಪ ಇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net