ಮರಗಳ ಸಂರಕ್ಷಣೆಗೆ ತಾಯಿ ಹೆಸರಲ್ಲಿ ಒಂದು ಗಿಡ

HUN-MAY-23-4(AMRUTH MITRA PROGRAMME)
ಹುಣಸೂರು ನಗರಸಭೆಯ ಆವರಣದಲ್ಲಿ ಅಮೃತ ಮಿತ್ರ ಯೋಜನೆಯಡಿ ತಾಯಿಯ ಹೆಸರಿನಲ್ಲಿ ಒಂದು ಗಿಡ ಕಾರ್ಯಕ್ರಮ ಪ್ರಯುಕ್ತ ನಗರಸಭೆ ಅಧ್ಯಕ್ಷ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಚಾಲನೆ ನೀಡಿದರು.
Published on

ಹುಣಸೂರು: ಕೇಂದ್ರ ಸರ್ಕಾರ ರೂಪಿಸಿರುವ ಅಮೃತ ಮಿತ್ರ ಕಾರ್ಯಕ್ರಮವನ್ನು ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ಘೋಷವಾಕ್ಯದೊಂದಿಗೆ ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಚಾಲನೆ ನೀಡಿದರು.

ಶುಕ್ರವಾರ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮರಗಳ ಸಂರಕ್ಷಣೆಗೆ ಮಹಿಳೆಯರ ಪಾಲ್ಗೊಳ್ಳುವಿಕೆಯ ಮೂಲಕ ಸಮುದಾಯದ ಸಹಭಾಗಿತ್ವ ಸಾಧಿಸಲು ತಾಯಿಯ ಹೆಸರಿನಲ್ಲಿ ಒಂದು ಗಿಡ ಎನ್ನುವ ಉದ್ದೇಶದೊಂದಿಗೆ ಕೇಂದ್ರ ಸರ್ಕರ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಘೋಷಿಸಿದೆ. ಅದರಂತೆ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದು, ಹುಣಸೂರು ನಗರಸಭೆಯಲ್ಲಿ ಯೋಜನೆ ಜಾರಿಗೆ ಕ್ರಮವಹಿಸಲಾಗಿದೆ.

ಸರ್ಕಾರಿ ಕಚೇರಿಗಳ ಆವರಣ, ಜಲಮೂಲಗಳು ಇರುವ ಸರ್ಕಾರಿ ಜಾಗಗಳು, ಕೆರೆಕಟ್ಟೆಗಳು, ಪಾರ್ಕ್‌ಗಳಲ್ಲಿ ಮರ ನಡುವ ಕಾರ್ಯಕ್ಕೆ ಮೊದಲ ಹಂತವಾಗಿ ಜಾಗಗಳನ್ನು ಗುರುತಿಸಲು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ಆಯ್ಕೆ ಮಾಡಲಾಗುತ್ತದೆ. ನಗರವ್ಯಾಪ್ತಿಯಲ್ಲಿ ಶಿವಜ್ಯೋತಿ ನಗರದ ಭುವನೇಶ್ವರಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಮತ್ತು ಕಲ್ಕುಣಿಕೆಯ ಡಾ.ಬಾಬು ಜಗಜೀವನರಾಂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಯೋಜನೆಯ ಪರಿಣಾಮಕಾರಿ ಜಾರಿಗೆ ಕ್ರಮವಹಿಸಲಾಗುವುದು ಎಂದರು.

ಪೌರಾಯುಕ್ತೆ ಕೆ.ಮಾನಸಾ, ಪರಿಸರ ಇಂಜಿನಿಯರ್ ಸೌಮ್ಯ, ಯೋಜನಾಧಿಕಾರಿ ಲೀಲಾವತಿ ಮತು ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಜರಿದ್ದರು. ಪರಿಸರ ಸಂರಕ್ಷಣೆ ಕೈಗೊಳ್ಳುವ ಕುರಿತು ಸಂಘದ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net