ಮೈಸೂರಿನಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾನಕ್ಕೆ ಯೋಜನೆ ಸಿದ್ಧ

Lalitha-Mahal-Palace-Road-food-street
Published on

ಆರ್.ಕೃಷ್ಣ ಮೈಸೂರು
ಪ್ರವಾಸಿಗರ ತಾಣ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ಯದಲ್ಲೇ ಸುಸಜ್ಜಿತ ಅತ್ಯಾಧುನಿಕ ಫುಡ್ ಸ್ಟ್ರೀಟ್ ನಿರ್ಮಾಣಗೊಳ್ಳಲಿದೆ.
ಸೌಲಭ್ಯವನ್ನು ಒಳಗೊಂಡ ಫುಡ್ ಸ್ಟ್ರೀಟ್ ನಿರ್ಮಾಣಕ್ಕೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಮೈಸೂರು ನಗರಪಾಲಿಕೆ, ಯೋಜನಾ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ.
ಆಹಾರ ಸುರಕ್ಷತೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರದ ಆರೋಗ್ಯ ಸಚಿವಾಲಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಪ್ರಾಯೋಗಿಕವಾಗಿ ದೇಶದ ನೂರು ಕಡೆಗಳಲ್ಲಿ ಅತ್ಯಾಧುನೀಕ ಫುಡ್ ಸ್ಟ್ರೀಟ್ ನಿರ್ಮಿಸಲು ಆರ್ಥಿಕ ನೆರವು ನೀಡಲಿದೆ.
ಈ ಯೋಜನೆ ಅಡಿಯಲ್ಲಿ ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿ ಈಗಾಗಲೇ ನಡೆಯುತ್ತಿರುವ ಸ್ಟ್ರೀಟ್ ಫುಡ್ ಜಾಗವನ್ನು ಅತ್ಯಾಧುನಿಕಗೊಳಿಸಿ ಸುವ್ಯವಸ್ಥಿತವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಒಂದು ಕೋಟಿ ರೂ. ಅನುದಾನ ನೀಡಲಿದೆ.
ಇದರಿಂದ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರೋತ್ಸಾಹ ನೀಡುವ ಜತೆಗೆ ಸುರಕ್ಷಿತ, ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗುತ್ತದೆ. ಪ್ರವಾಸಿಗರ ಆಕರ್ಷಣೀಯ ತಾಣವಾಗಿರುವ ಮೈಸೂರಿಗೆ ರಾಜ್ಯ, ಅಂತಾರಾಜ್ಯ, ಹೊರ ದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಅವರಿಗೆ ಗುಣಮಟ್ಟದ ಸುರಕ್ಷಿತ ಪ್ರದೇಶದಲ್ಲಿ ಆಹಾರ ಸೇವನೆಗೆ ಅವಕಾಶ ಮಾಡಿಕೊಟ್ಟಂತೆ ಅಗುತ್ತದೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಡಿಯಲ್ಲಿ 60:40 ಅಥವಾ 90:10 ಅನುದಾನದಲ್ಲಿ ನೆರವು ಸಿಗುವ ನಿರೀಕ್ಷೆ ಇದೆ. ಜತೆಗೆ ಎಫ್‌ಎಸ್‌ಎಸ್‌ಎಐ ನ ತಾಂತ್ರಿಕ ನೆರವು ದೊರೆಯಲಿದ್ದು, ಅದರ ಮಾರ್ಗದರ್ಶನದ ಪ್ರಕಾರವೇ ಫುಡ್ ಸ್ಟ್ರೀಟ್‌ನಲ್ಲಿ ಮಾರಾಟ, ಸೌಲಭ್ಯ ನೀಡಬೇಕಿದೆ.

ಯೋಜನೆ ಜಾರಿಗೆ ವಿಳಂಬ
ಆಹಾರ ಸುರಕ್ಷತೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಚೈತನ್ಯ ನೀಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಮಾಡ್ರನೈಜ್ಡ್ ಫುಡ್ ಸ್ಟ್ರೀಟ್’ ರೂಪಿಸುವ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ವೇಗ ಪಡೆದುಕೊಂಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕೇಂದ್ರ ಸರ್ಕಾರದ ಯೋಜನೆ ರಾಜ್ಯದಲ್ಲಿ ನಾಲ್ಕು ಕಡೆಗಳಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ಎರಡು, ಮೈಸೂರು, ಉಡುಪಿಯಲ್ಲಿ ತಲಾ ಒಂದು ಫುಡ್ ಸ್ಟ್ರೀಟ್‌ಗಳನ್ನು ರೂಪಿಸಲು ನಿರ್ಧರಿಸಲಾಗಿದೆ. ಆದರೆ ಯೋಜನೆಗೆ ಅಗತ್ಯವಾದ ಪೂರ್ಣ ಯೋಜನಾ ವರದಿ (ಡಿಪಿಆರ್) ತಯಾರಿಸುವಲ್ಲಿ ಸಂಬಂಧಪಟ್ಟ ಸ್ಥಳೀಯ ಆಡಳಿತ ಇಚ್ಛಾಶಕ್ತಿ ತೋರಿಲ್ಲ. ಹೀಗಾಗಿ ಮಾರ್ಚ್‌ನಲ್ಲಿಯೇ ಘೋಷಣೆಯಾಗಿದ್ದ ಯೋಜನೆ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳಿಸಬೇಕು ಎನ್ನುವ ಗುರಿ ನೀಡಿದ್ದರೂ ಇನ್ನು ಕಾರ್ಯಗತವಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಯೋಜನೆಯ ಉದ್ದೇಶವೇನು?
ರಸ್ತೆ ಬದಿ ಆಹಾರ ನೀಡುವಾಗ ಶುಚಿತ್ವ ವಾತಾವರಣ ಇರಬೇಕು, ತ್ಯಾಜ್ಯ ವಿಲೇವಾರಿ ಕುರಿತು ವ್ಯಾಪಾರಿಗಳಿಗೆ ತರಬೇತಿ ನೀಡಿರಬೇಕು, ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಕಾಳಜಿ ಇರಬೇಕು, ಈ ಮೂಲಕ ಸಾರ್ವಜನಿಕರ ಆರೋಗ್ಯದ ಸುಧಾರಣೆ ಆಗಬೇಕು, ಆಹಾರದಿಂದ ಹರಡುವ ರೋಗಗಳ ನಿಯಂತ್ರಣವಾಗಬೇಕು, ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಉತ್ತೇಜನ ನೀಡುವುದು, ಸ್ಥಳೀಯ ಸ್ವಉದ್ಯೋಗಕ್ಕೆ ಪ್ರೋತ್ಸಾಹ, ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಫುಡ್ ಸ್ಟ್ರೀಟ್‌ನಲ್ಲಿ ಏನಿರಬೇಕು?:

ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ, ಶುದ್ಧ ಕುಡಿಯುವ ನೀರು, ಶೌಚಗೃಹ, ರಸ್ತೆ ಟೈಲ್ಡ್ ಫ್ಲೊರಿಂಗ್, ಡಸ್ಟ್ ಬಿನ್ ವ್ಯವಸ್ಥೆ, ಘನ ಮತ್ತು ದ್ರವ ತ್ಯಾಜ್ಯದ ಸೂಕ್ತ ವಿಲೇವಾರಿಗೆ ಘಟಕ, ಕಾಮನ್ ಸ್ಟೋರೇಜ್ ಸ್ಪೇಸ್, ಬಿಲ್ ಬೋರ್ಡ್ ಬಳಕೆ ಮತ್ತು ತಿನಿಸುಗಳ ಪಟ್ಟಿ, ಉತ್ತಮ ಬೆಳಕಿನ ವ್ಯವಸ್ಥೆ ಇರಬೇಕಿದೆ.

ಯೋಜನಾ ವರದಿ ಸಿದ್ಧ
ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ಮಾಡುವ ಸಂಬಂಧ ಈಗಾಗಲೇ ಯೋಜನಾ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅನುಮತಿ ದೊರೆತ ಬಳಿಕ ಲಲಿತಮಹಲ್ ರಸ್ತೆಯಲ್ಲಿ ಕಾಮಗಾರಿ ಆರಂಭಿಸಲಾಗುವುದು. ಇದರಿಂದ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ನಗರದಲ್ಲಿ ನಡೆಯುತ್ತಿರುವ ಇತರ ಫುಡ್ ಸ್ಟ್ರೀಟ್‌ಗಳ ಕಡೆಯೂ ಆಹಾರ ಸುರಕ್ಷತೆ, ಗುಣಮಟ್ಟದ ಕಡೆ ಗಮನಹರಿಸಲು ಕ್ರಮಕೈಗೊಳ್ಳಲಾಗುವುದು.
ಅಸಾದ್ ಉರ್ ರೆಹಮಾನ್ ಷರೀಫ್
ಆಯುಕ್ತರು, ಮೈಸೂರು ನಗರಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net