ಜೀವನದಿ ಕಾವೇರಿ ರಕ್ಷಣೆಗೆ ಯೋಜನೆ ಅಗತ್ಯ

03Kush01
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಆಯೋಜಿಸಿದ್ದ ಮಹಾ ಆರತಿ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು, ಡಾ.ಬಿ.ಕೆ. ಹರೀಶ್ ಕುಮಾರ್. ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಕೆಂಚಪ್ಪ, ಚೈತನ್ಯ ಮತ್ತಿತರರು ಇದ್ದರು.
Published on

ಕುಶಾಲನಗರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜೀವನದಿ ಕಾವೇರಿ ರಕ್ಷಣೆಗೆ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಸೆಂಟರ್ ಫಾರ್ ಎಜುಕೇಷನ್ ಎನ್ವಿರಾನ್ಮೆಂಟ್ ಯಂಡ್ ಕಮ್ಯೂನಿಟಿ (ಸೀಕೋ) ಸಂಸ್ಥೆ ಮುಖ್ಯಸ್ಥ ಡಾ.ಬಿ.ಕೆ. ಹರೀಶ್ ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.

ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಮಹಾ ಆರತಿ ಬಳಗ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 152 ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನದಿಗಳು ಜೀವನದ ಸ್ಫೂರ್ತಿಯ ಸೆಲೆ. ಜತೆಗೆ ಸಂಸ್ಕೃತಿಯ ಮೂಲ ಸ್ಥಾನ. ಹಾಗಾಗಿ ನದಿಯನ್ನು ಜನರು ಹಲವು ದೃಷ್ಟಿಕೋನಗಳಿಂದ ನೋಡುತ್ತಿದ್ದು, ಜಲಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.

ನದಿಗಳನ್ನು ಪೂಜಿಸುವುದರಿಂದ ಪ್ರಕೃತಿಯ ಅಸ್ತಿತ್ವ ಉಳಿಯಲಿದೆ. ಕುಶಾಲನಗರದಲ್ಲಿ 13 ವರ್ಷಗಳಿಂದ ಪ್ರತಿ ಹುಣ್ಣಿಮೆಯಂದು ಕಾವೇರಿಗೆ ಮಹಾ ಆರತಿ ಬೆಳಗಲಾಗುತ್ತಿದೆ. ಗಂಗಾರತಿ ರೀತಿಯಲ್ಲಿ ಕಾವೇರಿಗೆ ನಿತ್ಯ ಆರತಿ ಬೆಳಗುವ ಕಾರ್ಯ ಆಗಬೇಕಾಗಿದೆ ಎಂದರು.

ಅರ್ಚಕ ಕೃಷ್ಣಮೂರ್ತಿ ಭಟ್ ಕುಂಕುಮಾರ್ಚನೆ, ಅಷ್ಟೋತ್ತರ ನಡೆಸಿದ ನಂತರ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಲಾಯಿತು. ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಕೆಂಚಪ್ಪ, ಚೈತನ್ಯ ಮತ್ತಿತರರು ಇದ್ದರು.

ಕಾರ್ತಿಕ ಹುಣ್ಣಿಮೆ ಅಂಗವಾಗಿ ಕುಶಾಲನಗರ ವಾಸವಿ ಯುವತಿಯರ ಸಂಘದ ಆಶ್ರಯದಲ್ಲಿ ನದಿ ತಟದಲ್ಲಿ ಪೂಜೆ ಸಲ್ಲಿಸಿ ನದಿಗೆ ಆರತಿ ಬಿಡಲಾಯಿತು. ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಮಾಜಿ ಅಧ್ಯಕ್ಷ ಪ್ರತಿಮಾ ರಾಘವೇಂದ್ರ, ಕಾರ್ಯದರ್ಶಿ ಸ್ನೇಹ ನಿತಿನ್ ಮತ್ತು ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net