ಮಠಗಳ ಪುನರುತ್ಥಾನಕ್ಕೆ ಯೋಜನೆ

Raghaveswar
Published on

ಗೋಕರ್ಣ: ಹನ್ನೆರಡು ನೂರಕ್ಕೂ ಅಧಿಕ ವರ್ಷಗಳ ಪರಂಪರೆ ಹೊಂದಿರುವ ಶ್ರೀರಾಮಚಂದ್ರಾಪುರ ಮಠದ ಇತಿಹಾಸದಲ್ಲಿ 800 ವರ್ಷಗಳ ನಂತರ ಎರಡು ಮಠಗಳ ಪುನರುತ್ಥಾನ ನಡೆಯಲಿದೆ. ಹೊಸನಗರದಲ್ಲಿರುವ ಪ್ರಧಾನ ಮಠ ಮತ್ತು ತೀರ್ಥಹಳ್ಳಿ ಮಠಗಳ ನವನಿರ್ಮಾಣಕ್ಕೆ ಕಾರ್ಯ ಯೋಜನೆ ಸಿದ್ಧವಾಗಿದ್ದು, ಸದ್ಯದಲ್ಲಿಯೇ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಲಿವೆ ಎಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ದೀಕ್ಷಾಧಾರಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಗುರುವಾರ ನಡೆದ ಹೊಸನಗರ, ಶಿವಮೊಗ್ಗ ಮತ್ತು ತೀರ್ಥರಾಜಪುರ ವಲಯಗಳ ಶಿಷ್ಯಭಕ್ತರ ಭಿಕ್ಷಾಸೇವೆಯಲ್ಲಿ ಅವರು ಆಶೀರ್ವಚನ ನೀಡಿದರು.

ತೀರ್ಥಹಳ್ಳಿ ಮಠ ನಮ್ಮ ದೊಡ್ಡ ಗುರುವರ್ಯರು ಜೀವಿತಾವಧಿಯ ಬಹುಪಾಲು ಸಮಯವನ್ನು ಕಳೆದ ಪುಣ್ಯಸ್ಥಳ. ಕಾರಣ ಈ ಮಠದ ಪುನರುತ್ಥಾನ ಆಗಲೇಬೇಕು ಎನ್ನುವುದು ನಮ್ಮ ಮಹದಾಶಯ. ಈ ಬಗ್ಗೆ ಸ್ಥಳೀಯರು ಹೆಚ್ಚಿನ ಆಸ್ಥೆ ವಹಿಸಬೇಕು. ಈ ಭಾಗದಲ್ಲಿ ನಮ್ಮ ಸಮಾಜದ ಸಂಖ್ಯೆ ಕಡಿಮೆ ಪ್ರಮಾಣದಲ್ಲಿದೆ. ಆದರೆ, ಗುರುಪೀಠದ ಸಂಕಲ್ಪವಿರುವಾಗ ಯಾರೂ ಎದೆಗುಂದುವ ಅಗತ್ಯವಿಲ್ಲ. ಆಗಲೇಬೇಕು ಎಂಬ ದೃಢ ಸಂಕಲ್ಪವಿದ್ದರೆ ಕಾರ್ಯಸಿದ್ಧಿ ಖಚಿತ. ಧೈರ್ಯದಿಂದ ಮುಂದಡಿಯಿಡಲು ಯಾವ ಅಳಕೂ ಬೇಡ ಎಂದು ಶ್ರೀಗಳು ಸಲಹೆ ನೀಡಿದರು.

ಇದೇ ಬಗೆಯಲ್ಲಿ ಹೊಸನಗರ ಪ್ರಧಾನ ಮಠದ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿ ಕಟ್ಟುವ ಕಾರ್ಯಕ್ಕೂ ಚಾಲನೆ ಸಿಕ್ಕಿದೆ. ಈಗಿರುವ ಮಠದ ಈಶಾನ್ಯದಲ್ಲಿ ಭವ್ಯವಾದ ಹೊಸ ಮಠ ನಿರ್ಮಾಣವಾಗುವುದು. ಈ ಮಹತ್ಕಾರ್ಯಕ್ಕೆ ವಿಶೇಷವಾಗಿ ಈ ಭಾಗದ ಭಕ್ತರಿಂದ ದೊಡ್ಡ ಪ್ರಮಾಣದ ತ್ಯಾಗ ಮತ್ತು ಸಮರ್ಪಣೆಗಳಾಗಬೇಕು. ಈ ಎರಡೂ ಮಠಗಳು ಮತ್ತೆ ನಾವಿನ್ಯವಾಗಿ ನಿರ್ಮಾಣವಾಗುವ ಮೂಲಕ ಶ್ರೀಮಠದ ಸಂಘಟನೆ ಬಲಗೊಳ್ಳಬೇಕು. ಇಂತಹ ಸತ್ ಸೇವೆಗಳಿಗೆ ಶಿಸ್ತು, ಸಂಯಮ ಮತ್ತು ಸಮಯ ಪಾಲನೆ ಯಶಸ್ಸಿನ ಸೂತ್ರವಾಗಿದೆ. ಇದು ಪರಿವರ್ತನೆಯ ಕಾಲಘಟ್ಟವಾಗಿದೆ. ಇಂತಹ ಯುಗ ಪ್ರವರ್ಧನೆಯ ವೇಳೆ ಸೇವಾ ಶೂನ್ಯರಾಗದೆ ನಮ್ಮ ಕೈಲಾದ ಸೇವೆಗೆ ಸರ್ವರೂ ಪ್ರವರ್ತರಾಗಲಿ. ನಮ್ಮ ದೇಹ ಮತ್ತು ಮನಸ್ಸನ್ನು ಗರಿಷ್ಠ ಮಟ್ಟದಲ್ಲಿ ಸಕ್ರಿಯವಾಗಿಸುವ ಈ ಬಗೆಯ ಸೇವೆಗಳೇ ಚಿರತಾರುಣ್ಯದ ಮಾಧ್ಯಮ ಎಂದು ಆಶೀರ್ವದಿಸಿ ಅನುಗ್ರಹವಿತ್ತರು.

ಸಾಧಕರನ್ನು ಸನ್ಮಾನಿಸಲಾಯಿತು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಹವ್ಯಕ ಮಹಾ ಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಹೊಸನಗರ ಮಂಡಲಾಧ್ಯಕ್ಷ ಜೆ.ಎನ್. ಪ್ರಕಾಶ, ಕಾರ್ಯದರ್ಶಿ ಕೆ.ಎಲ್. ರಮೇಶ, ಉಪಾಧ್ಯಕ್ಷ ಭಾಗಿ ಶ್ರೀಕಾಂತ, ನಿಕಟ ಪೂರ್ವ ಅಧ್ಯಕ್ಷ ಜಟ್ಟಿಮನೆ ಗಣಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net