

ಯಲ್ಲಾಪುರ: ತಾಲೂಕಿನ ಕಿರವತ್ತಿ ವಲಯ ವ್ಯಾಪ್ತಿಯಿಂದ ಅಕ್ರಮವಾಗಿ ಕಡಿದು ಸಾಗಿಸಿದ್ದ ಸಾಗವಾನಿ ತುಂಡುಗಳನ್ನು ಬೆಳಗಾವಿ ಜಿಲ್ಲೆಯ ಬಾಗೇವಾಡಿಯಲ್ಲಿ ಯಲ್ಲಾಪುರದ ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಧಾರವಾಡ ಜಿಲ್ಲೆಯ ಸಿಂಗನಳ್ಳಿಯ ಮೆಹಬೂಬ್ ಸಾಬ ರಾಜೇಸಾಬ ಗುಡಿಸಲಮನಿ ಹಾಗೂ ದಾವಲಸಾಬ ಮೌಲಾಸಾಬ ಬ್ಯಾಳಿ ಬಂಧಿತರು. ಇವರು ಕಳೆದ ಜುಲೈ ತಿಂಗಳಿನಲ್ಲಿ ಕಿರವತ್ತಿ ವಲಯ ವ್ಯಾಪ್ತಿಯಲ್ಲಿ ಸಾಗವಾನಿ ಮರಗಳನ್ನು ಕಡಿದು ಬೆಳಗಾವಿಯ ಬಾಗೇವಾಡಿಯಲ್ಲಿ ದಾಸ್ತಾನು ಇಟ್ಟಿದ್ದರು.
ಸಿಟಿಆರ್, ಟಿಡಿಆರ್ ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿಗಳು ಹಾಗೂ ಕದ್ದ ಸಾಗವಾನಿ ತುಂಡುಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. 3 ಲಕ್ಷ ರೂ. ಮೌಲ್ಯದ 11 ಸಾಗವಾನಿ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಎಫ್ ಎಸ್.ಜಿ. ಹೆಗಡೆ, ಎಸಿಎಫ್ ಆನಂದ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಡಿ.ಎಲ್. ಮಿರ್ಜಾನಕರ್, ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ ಗೌಡ, ಮಂಜುನಾಥ ಕಾಂಬಳೆ, ವಿನಯ ರಾಮನಗೋನಟ್ಟಿ, ಕಿರಣಕುಮಾರ ನಾಯ್ಕ, ಪ್ರಶಾಂತ ಪಟಗಾರ, ಅರಣ್ಯಪಾಲಕರಾದ ಶ್ರೀಧರ ಭಜಂತ್ರಿ, ಮಲ್ಲಪ್ಪ ಹುಚ್ಚನ್ನವರ್, ವಿಶಾಲ ದಾಸರ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.