

ಮೈಸೂರು: ಆಸ್ತಿಯಿಂದ ಅಸ್ತಿತ್ವ ಗುರುತಿಸದೆ ಅಸ್ತಿತ್ವವೇ ಆಸ್ತಿಯಾದಾಗ ಮನುಷ್ಯನ ಜೀವನ ಸಾರ್ಥಕ ಎಂದು ತುಮಕೂರು ತಪೋವನದ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ, ಸನ್ಮಾನ, ಬಹುಮಾನ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಆಸ್ತಿ ಮಾಡುವ ಮೂಲಕ ಮನುಷ್ಯ ತನ್ನ ಅಸ್ತಿತ್ವ ಕಂಡುಕೊಳ್ಳಲು ಹೋಗುತ್ತಿದ್ದಾನೆ. ಇದರಿಂದ ಮಾನವೀಯ ಗುಣ, ಶಾಂತಿ ಇಲ್ಲವಾಗುತ್ತಿದೆ. ಹಾಗಾಗಿ, ಅಸ್ತಿತ್ವವನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ತಮ್ಮ ಇರುವಿಕೆಯನ್ನು ಬಿಟ್ಟು ಹೋಗಿ ಎಂದು ಸಲಹೆ ನೀಡಿದರು.
ಭಾರತ ಬಡರಾಷ್ಟ್ರ ಎಂದು ಬಿಂಬಿಸುತ್ತಿದ್ದ ಪಾಶ್ಚಿಮಾತ್ಯ ದೇಶಗಳಿಗೆ ಸ್ವಾಮಿ ವಿವೇಕಾನಂದರು ಷಿಕಾಗೋದಲ್ಲಿ ಭಾಷಣ ಮಾಡುವ ಮೂಲಕ ಬೇರೆಯದೇ ಭಾರತ ದರ್ಶನ ಮಾಡಿಸಿದರು. ಈ ಮೂಲಕ ದೇಶದ ಹಿರಿಮೆಯೇ ಬದಲಾಯಿತು. ಇದರಿಂದ ಸ್ವಾಮಿ ವಿವೇಕಾನಂದರು ತಾಯಿ ಗರ್ಭದಲ್ಲಿ ಹುಟ್ಟಿದ್ದು ಒಂದು ಜನ್ಮವಾದರೆ, ಷಿಕಾಗೋ ಭಾಷಣ ಮೂಲಕ ಜಗತ್ತಿಗೆ ಮತ್ತೊಮ್ಮೆ ಜನ್ಮ ತಾಳಿದರು ಎಂದು ಬಣ್ಣಿಸಿದರು.
ಆಧುನಿಕ ತಂತ್ರಜ್ಞಾನದಿಂದಾಗಿ ದೇಶ, ದೇಶಗಳ ನಡುವೆ ಕ್ಷಣ ಮಾತ್ರದಲ್ಲಿ ಸಂದೇಶಗಳು ರವಾನೆಯಾಗುತ್ತಿವೆ. ಆದರೆ, ಸಂಸ್ಕೃತಿ- ಪರಂಪರೆಯನ್ನು ಗಟ್ಟಿಗೊಳಿಸಿರುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವೀಯ ಸಂಬಂಧಗಳು ದೂರವಾಗುತ್ತಿವೆ. ಪುಣ್ಯಪುರುಷರು ಜನ್ಮ ತಾಳಿದ ದೇಶದಲ್ಲಿ ಮತ್ತೆ ಮಾನವೀಯತೆ, ಧಾರ್ಮಿಕ ನೆಲೆಗಟ್ಟು ಗಟ್ಟಿಗೊಳ್ಳಬೇಕು ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸಾಹಿತಿ ಕೆ.ಸಿ.ಶಿವಪ್ಪ ಮಾತನಾಡಿ, ನಮ್ಮ ಉನ್ನತಿಗೆ ನಿರಂತರ ಪರಿಶ್ರಮ, ಸದಾ ಕಾರ್ಯಚಟುವಟಿಕೆಯಿಂದ ಇದ್ದರೆ ಸಾಧನೆ ಮಾಡಬಹುದು ಎನ್ನುವುದಕ್ಕೆ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಶಿವಕುಮಾರ್ ಸಾಕ್ಷಿ. ಕೇವಲ 5 ಸಾವಿರ ರೂ.ನಿಂದ ಉದ್ಯಮ ಆರಂಭಿಸಿ ಇಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಯಶಸ್ಸು ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಸಂಸ್ಕೃತಿ ಚಿಂತಕ ಶಂಕರ ದೇವನೂರು, ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್ ಇತರರು ಇದ್ದರು. ಮಹಾಲಕ್ಷ್ಮೀ ಸ್ವೀಟ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಆರೋಗ್ಯ ಕಾರ್ಡ್ ಸೇರಿದಂತೆ ಇನ್ನಿತರ ಸವಲತ್ತು ವಿತರಿಸಲಾಯಿತು.