

ಹೊಳಲ್ಕೆರೆ: ರಾಜ್ಯ-ರಾಜ್ಯಗಳ ನಡುವೆ ಉಲ್ಬಣಗೊಳ್ಳುತ್ತಿರುವ ಜಲವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ, ಸಂಕಷ್ಟ ಸೂತ್ರ ರೂಪಿಸಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ಧವೀರಪ್ಪ ಒತ್ತಾಯಿಸಿದರು.
ಪಟ್ಟಣದಲ್ಲಿ ರೈತಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಆದಾಗ್ಯೂ ಕಾವೇರಿ ನೀರು ನಿಯಂತ್ರಣ ಮಂಡಳಿ ತಮಿಳುನಾಡಿಗೆ ಪ್ರತಿನಿತ್ಯ ನೀರು ಬಿಡಲು ಆದೇಶಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಯಂತ್ರಣ ಮಂಡಳಿಯು ಮುಂದೆ ಸಂಕಷ್ಟದ ಕಾಲದ ಸೂತ್ರವನ್ನು ಜಾರಿಗೆ ತರುವಂತೆ ಮಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿರುವ ಕೃಷಿಕರ ಬದುಕು ಸಂಪೂರ್ಣ ನಾಶವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನದಿ ಪಾತ್ರದ ಅನೇಕ ಮಹಾನಗರ-ಪಟ್ಟಣಗಳ ನಾಗರಿಕರು ಜಲಕ್ಷಾಮಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಕೂಡಲೇ ಜಲಕ್ಷಾಮದ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿ ಮಧ್ಯ ಪ್ರವೇಶಿಸುವಂತೆ ಮಾಡಿ ಕೂಡಲೇ ಸೂಕ್ತ ತೀರ್ಮಾನವನ್ನು ಕೈಗೊಳ್ಳಲು ರಾಜ್ಯದ ಬಿಜೆಪಿ ಸಂಸದರು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಬಸವರಾಜ್, ಸಂತೋಷ್, ಸದಾಶಿವಪ್ಪ, ಚಂದ್ರಮೌಳಿ, ಜಯಪ್ಪ, ದಿವ್ಯಜ್ಯೋತಿ, ಗವಿರಾಜ್, ಪ್ರಸನ್ನ, ಶಿವಕುಮಾರ್, ಶ್ರೀನಿವಾಸ್, ಎಸ್.ಮಹದೇವಪ್ಪ, ಕೆ.ಸಿ.ಪರಮೇಶ್ವರಪ್ಪ, ಆರ್.ಶಿವರುದ್ರಪ್ಪ, ಎನ್.ರಂಗಸ್ವಾಮಿ, ಸಿ.ವಿ.ವಿಜಯಪ್ರಕಾಶ್ ಇತರರು ಇದ್ದರು.