ಹುಲಿ ಹಾವಳಿಗೆ ಸಿಗದ ಶಾಶ್ವತ ಪರಿಹಾರ

A permanent solution to the tiger menace
Published on

ವಿನೋದ್ ಮೂಡಗದ್ದೆ, ಗೋಣಿಕೊಪ್ಪ.

ಈಗಾಗಲೇ ಜಿಲ್ಲೆಯಾದ್ಯಂತ ಬಿಸಿಲಿನ ಝಳ ಹೆಚ್ಚಾಗಿದ್ದು, ಜನತೆ ಜತೆ ಜತೆಗೆ ಕಾಡು ಪ್ರಾಣಿಗಳೂ ತತ್ತರಿಸಿ ಹೋಗಿವೆ. ಕುಡಿಯುವ ನೀರು ಇಲ್ಲದೆ ತಮ್ಮ ದಾಹ ತೀರಿಸಿಕೊಳ್ಳಲು ನಾಡಿನತ್ತ ಲಗ್ಗೆ ಇಡುತ್ತಿವೆ. ಅರಣ್ಯ ಇಲಾಖೆಯವರು ಮಾನವ ವನ್ಯಪ್ರಾಣಿ ಸಂಘರ್ಷ ತಡೆಯಲು ಹರಸಾಹಸ ಪಡುತ್ತಿದ್ದಾರೆ.
ಬೇಸಿಗೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕರ್ತವ್ಯದ ಭಾರ ಹೆಚ್ಚು. ಒಂದು ಕಡೆ ಕಾಡಾನೆ ಹಾವಳಿ, ಮತ್ತೊಂದು ಕಡೆ ಕಾಳ್ಗಚ್ಚಿನ ಭೀತಿ. ಇದರ ಜತೆಗೆ ಈಗ ಹುಲಿ ಹಾವಳಿಯೂ ಹೆಚ್ಚಾಗುತ್ತಿದೆ. ಹಾಡಹಗಲೇ ಜಾನುವಾರುಗಳು ಹುಲಿಗೆ ಬಲಿಯಾಗುತ್ತಿವೆ. ಕೆಲವರು ಹೈನುಗಾರಿಕೆಯನ್ನೇ ನೆಚ್ಚಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರಿಗೆ ಹುಲಿ ಶಾಪವಾಗಿ ಪರಿಣಮಿಸಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಹುಲಿ ಹಾವಳಿ ಸಾಮಾನ್ಯವಾಗಿದ್ದು, ಇನ್ನೂ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ.

ಕೊಡಗಿನ ದಕ್ಷಿಣ ಭಾಗದಲ್ಲಿ ಮಾನವ ವನ್ಯಪ್ರಾಣಿ ಹಾವಳಿ ಹೆಚ್ಚಾಗಿದ್ದು. ಪೊನ್ನಂಪೇಟೆ ತಾಲೂಕಿನ ರೈತರು ಹೆಚ್ಚು ಬಾಧಿತರಾಗಿದ್ದಾರೆ. ಮೇಯಲು ಬಿಟ್ಟ ಹಸುಗಳು ಹುಲಿಯ ಆಹಾರವಾಗುತ್ತಿವೆ. ಅದೂ ಅಲ್ಲದೆ ರಾತ್ರೋ ರಾತ್ರಿ ದನದ ಕೊಟ್ಟಿಗೆಗೇ ದಾಳಿ ಮಾಡುತ್ತಿರುವ ಹುಲಿ ದನಗಳನ್ನು ಎತ್ತಿಕೊಂಡು ಹೋಗಿ ತಿಂದು ಮುಗಿಸಿ ರೈತರಿಗೆ ನಷ್ಟ ಉಂಟು ಮಾಡುತ್ತಿದೆ. ಸರ್ಕಾರದ ಕಡೆಯಿಂದ ಸಣ್ಣ ಪ್ರಮಾಣದ ಪರಿಹಾರ ದೊರೆಯುತ್ತದಾದರೂ ಅದು ಕೈ ಸೇರುವಾಗ ರೈತ ಹೈರಾಣಾಗಿರುತ್ತಾನೆ. ಹೈನುಗಾರಿಕೆಯನ್ನೇ ಮುಖ್ಯ ಕಸುಬು ಮಾಡಿಕೊಂಡವರ ಪಾಡು ಹೇಳತೀರದಾಗಿದೆ.

ಅರಣ್ಯ ಇಲಾಖೆಯಲ್ಲಿ ಕಾಡ್ಗಿಚ್ಚು ನಿಯಂತ್ರಣಕ್ಕೆ, ಹುಲಿಗಳ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯ ನಿರ್ವಹಿಸಬೇಕು. ಇರುವವರನ್ನೇ ಎಲ್ಲಾ ಕಡೆ ಬಳಸಿದರೆ ಎಲ್ಲಿಯೂ ಕೆಲಸ ಮುಗಿಯದೆ ರೈತ ಕಂಗಾಲಾಗುತ್ತಾನೆ. ಆದಷ್ಟು ಬೇಗ ಸÀರ್ಕಾರ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.ನಾವು ಅರಣ್ಯದ ಎಲ್ಲಾ ಭಾಗಕ್ಕೂ ತೆರಳಿ ಕೆಲಸ ನಿರ್ವಹಿಸುತ್ತೇವೆ. ಬೆಂಕಿ ಬಿದ್ದರೆ ಅಂತೂ ಆ ಸಂದರ್ಭ ವಿವರಿಸಲು ಆಗದು. ಇನ್ನು ಎಲ್ಲಿಯಾದರೂ ಹುಲಿ ದಾಳಿ ನಡೆದರೆ ಅಲ್ಲಿ ಹೋಗಿ ಹುಲಿಯ ಹೆಜ್ಜೆ ಗುರುತು ಪತ್ತೆ ಮಾಡುತ್ತಾ ಅದರ ಜಾಡು ಹಿಡಿಯಬೇಕು. ಆನೆ ಎಲ್ಲಿಯಾದರೂ ನಾಡಿನತ್ತ ಬಂದರೆ ಆನೆ ಕಾರ್ಯಾಚರಣೆ ನಡೆಸಬೇಕು. ಹೀಗೆ ಎಲ್ಲಾ ಕಡೆ ಇರುವುದರಿಂದ ಒತ್ತಡ ಹೆಚ್ಚು. ಒಂದೇ ಯೋಜನೆಗೆ ನಿಯೋಜಿಸಿದರೆ ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬಹುದು.

ಮೂಡಗದ್ದೆ ಹರಿಪ್ರಸಾದ್, ಆರ್‌ಆರ್‌ಟಿ ಸಿಬ್ಬಂದಿ, ಚೆನ್ನಂಗಿ

ಹಸು ಸಾಕಿಕೊಂಡು ಹಾಲು ಮಾರಿ ಜೀವನ ಸಾಗಿಸುತ್ತಿದ್ದೆವು. ಕೆಲ ತಿಂಗಳ ಹಿಂದೆ ಹುಲಿ ಮೇಯಲು ಬಿಟ್ಟಿದ್ದ ಹಸುವನ್ನು ಕೊಂದು ಹಾಕಿತು. ಅಧಿಕಾರಿಗಳು ಬಂದು ಬೋನು ಇಟ್ಟು ಹುಲಿ ಸೆರೆ ಹಿಡಿಯುವ ಪ್ರಯತ್ನ ಮಾಡಿದರೂ ಹುಲಿ ಬೇರೆಡೆ ಹೋಗಿಯಾಗಿತ್ತು. ಪರಿಹಾರ ಕೂಡ ಅಷ್ಟಕಷ್ಟೇ. ಮತ್ತೆ ಬೇರೆ ಹಸು ತಂದರೆ ಹುಲಿ ಬರುವುದಿಲ್ಲ ಎನ್ನುವ ಭರವಸೆ ಇಲ್ಲ.

ಎಚ್.ಸಿ. ಭಾಗ್ಯ, ಮಾಯಮುಡಿ ಗ್ರಾಮ

ಪ್ರತಿ ವರ್ಷ ಮೀಸಲು ಅರಣ್ಯಕ್ಕೆ ಬೆಂಕಿ ಬೀಳುತ್ತಿದೆ. ನೂರಾರು ಎಕರೆ ಸುಟ್ಟು ಹೋಗುತ್ತಿದೆ. ಅಪರೂಪದ ಪ್ರಾಣಿ, ಪಕ್ಷಿ ಸಂಕುಲ ನಾಶವಾಗುತ್ತಿದೆ. ಒಂದು ಮೀಸಲು ಅರಣ್ಯ ಕಾಯಬೇಕಾದರೆ 500 ಸಿಬ್ಬಂದಿ ಬೇಕು. ಸುಧಾರಿತ ಯಂತ್ರೋಪಕರಣಗಳು, ಪರಿಕರಗಳು ವಾಹನಗಳು ಬೇಕು. ಈಗಿನ ಪರಿಸ್ಥಿತಿ ನೋಡಿದರೆ ಒಂದು ಅರಣ್ಯ ಕಾಯಲು 50 ಸಿಬ್ಬಂದಿ ಇರುತ್ತಾರೆ. ಇಷ್ಟು ನಿರ್ಲಕ್ಷö್ಯ ಮಾಡಿದರೆ ಕೆಲವೇ ವರ್ಷಗಳಲ್ಲಿ ಅರಣ್ಯ ಸಂಪತ್ತು ನಾಶವಾಗಲಿದೆ.
ಎಚ್.ಆರ್. ಗಗನ್, ಕಾಫಿ ಬೆಳೆಗಾರ, ಹಿರಿಕರ ಗ್ರಾಮ, ಸೋಮವಾರಪೇಟೆ.

ವರ್ಷದಿಂದ ವರ್ಷಕ್ಕೆ ಹುಲಿ ದಾಳಿ ಹೆಚ್ಚುತ್ತಲೇ ಇದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರೀತಿಯಿಂದ ಸಾಕಿದ ದನಗಳು ಹುಲಿಯ ಹೊಟ್ಟೆ ಸೇರುತ್ತಿದೆ. ಎಷ್ಟೇ ಹೋರಾಟ ಮಾಡಿದರೂ ಇಲಾಖೆ ಮತ್ತು ಸಂಬAಧಿಸಿದವರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತೀಚಿಗಿನ ದಿನಗಳಲ್ಲಿ ಹುಲಿಗಳು ಹಾಡಹಗಲೇ ರಾಜಾರೋಷವಾಗಿ ಓಡಾಡುತ್ತಿವೆ. ಇದರಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ರೈತರಿಗೆ ನಷ್ಟವಾಗುತ್ತಿದೆ. ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರವಾಗಬೇಕಿದೆ.
ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಸಂಘದ ಅಧ್ಯಕ್ಷ, ಮಾಯಮುಡಿ ಗ್ರಾಮ

ಹುಲಿಯ ಸಂಚಾರ ಹೆಚ್ಚಾಗಿದೆ. ಎಲ್ಲಿಯಾದರು ಹುಲಿ ಓಡಾಡಿದೆ ಅಂತ ಗೊತ್ತಾದರೆ ಆ ಕಡೆಗೆ ಜನರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಕೊಯ್ಲಿನ ಸಮಯದಲ್ಲಂತೂ ರೈತರ ಪಾಡು ಹೇಳತೀರದು. ಹುಲಿ ಭಯ, ಫಸಲು ಉಳಿಸಿಕೊಳ್ಳುವ ಆತುರ. ಇಲಾಖೆಯವರು ಸರಿಯಾಗಿ ಮಾನಿಟರಿಂಗ್ ಮಾಡಿ ಹುಲಿಗಳ ಸಂಚಾರದ ಮೇಲೆ ನಿಗಾ ಇಡಬೇಕು. ರೈತರ ಸಂಕಷ್ಟ ತಪ್ಪಿಸಬೇಕು.
ಕಟ್ಟೇರ ವಿಶ್ವನಾಥ್ ಗಣೇಶ್, ರೈತರು, ಟಿ.ಶೆಟ್ಟಿಗೇರಿ

ಕೊಡಗಿನ ದಕ್ಷಿಣ ಭಾಗದಲ್ಲಿ ಹುಲಿಗಳ ಸಂಚಾರ ಹೆಚ್ಚಿದೆ. ಈಗಾಗಲೇ ಅಲ್ಲಲ್ಲಿ ಟ್ರ‍್ಯಾಪಿಂಗ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ರೈತರು, ಸಾರ್ವಜನಿಕರು ಎಲ್ಲಿಯಾದರು ಹುಲಿ ಅಥವಾ ಅದರ ಕುರುಹು ಕಂಡರೆ ಕೂಡಲೇ ಇಲಾಖೆಗೆ ತಿಳಿಸಬೇಕು. ಈಗಾಗಲೇ ಕೆಲವು ಕಡೆ ನಮ್ಮ ತಂಡ ಕೂಂಬಿAಗ್ ಕಾರ್ಯಾಚರಣೆ ನಡೆಸುತ್ತಿದೆ. ಹುಲಿ ಇರುವುದು ಪತ್ತೆಯಾದಲ್ಲಿ ಅದನ್ನು ವಸತಿ ಪ್ರದೇಶದಿಂದ ಕಾಡಿಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net