

ಮೈಸೂರು: ನಾವು ಮಾಡುವ ಆಲೋಚನೆಗಳಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಂಡರೆ ಬದುಕಿನಲ್ಲಿ ಹಲವು ಸಾಧನೆಗಳನ್ನು ಸಾಧಿಸಬ ಹುದು ಎಂದು ಅಮೇಜಾನ್ ಕಂಪನಿಯ ಭಾರತದ ಡಿಇಐ ಲೀಡರ್ ತನುಜಾ ಅಬ್ಬುರಿ ಹೇಳಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆಹಾರದ ಪ್ಯಾಕೇಜಿಂಗ್‌ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬದಲು ಕಾಗದ ಬಳಕೆ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಶುಕ್ರವಾರ ‘ಕಾರ್ಯ ಸ್ಥಳದಲ್ಲಿ ಆವಿಷ್ಕಾರದ ಉತ್ತೇಜನ’ ವಿಷಯದ ಕುರಿತು ಮಾತನಾಡಿದರು.
ಮಾರುಕಟ್ಟೆಯಲ್ಲಿ ಪ್ರಸ್ತುತ ಹಲವಾರು ಎನರ್ಜಿ ಡ್ರಿಂಕ್ಸ್‌ಗಳು ಇದ್ದು, ಪೈಪೋಟಿ ಕೂಡ ದೊಡ್ಡ ಪ್ರಮಾಣದಲ್ಲಿಯೇ ಇದೆ. ಇಂತಹ ವಾತಾವರಣದಲ್ಲಿ ಯಾರು ಸಹ ಹೊಸದಾಗಿ ಎನರ್ಜಿ ಡ್ರಿಂಕ್ಸ್ ಪ್ರಾರಂಭಿಸಲು ಆಲೋಚನೆ ಮಾಡುವುದಿಲ್ಲ. ಪೈಪೋಟಿಯ ನಡುವೆಯೂ ಹೊಸ ಸಾಹಸಕ್ಕೆ ‘5 ಹೌರ್ಸ್ ಎನರ್ಜಿ’ ಕಂಪನಿ ಕೈ ಹಾಕಿ ಯಶಸ್ಸು ಕಂಡಿತು. ಈ ಯಶಸ್ಸಿಗೆ ‘5 ಹೌರ್ಸ್ ಎನರ್ಜಿ’ ಎಂಬ ಹೆಸರು ಪ್ರಮುಖ ಕಾರಣವಾದರೆ ಮತ್ತೊಂದು ಕಾರಣ ಉಳಿದೆಲ್ಲ ಎನರ್ಜಿ ಬಾಟಲಿಗಳಿಗಿಂತ ‘5 ಹೌರ್ಸ್ ಎನರ್ಜಿ’ ಬಾಟಲಿಗಳು ಚಿಕ್ಕದಾ ಗಿದ್ದು, ಆಕರ್ಷಕವಾಗಿದೆ. ಹಾಗಾಗಿ ನಮ್ಮ ಆಲೋಚನೆಯಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಂಡರೆ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ಯಾವುದೇ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವ ಬದಲು ಸಮಸ್ಯೆಗಳನ್ನು ಅಧ್ಯಯನ ಮಾಡಿ ಅರ್ಥೈಸಿಕೊಂಡು ಅದಕ್ಕೆ ಶಾಶ್ವತ ಪರಿಹಾರ ರೂಪಿಸುವುದು ಅವಶ್ಯಕ. ಸಮಸ್ಯೆಗೆ ತಕ್ಷಣದ ಪರಿಹಾರದ ಬದಲು ದೀರ್ಘಕಾಲದ ಪರಿಹಾರದ ಅವಶ್ಯಕತೆ ಇದ್ದು, ಇದಕ್ಕೆ ಹೊಸ ದೃಷ್ಟಿಕೋನ ಅವಶ್ಯಕ ಎಂದು ಹೇಳಿದರು.
ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ರೈಲು ಹಳಿಗಳನ್ನು ದಾಟುವ ಸಂದರ್ಭ ಸಾಕಷ್ಟು ಅಪಘಾತಗಳು ಸಂಭವಿಸುತಿತ್ತು. ದಿನಕ್ಕೆ ಕನಿಷ್ಠ 8-10 ಜನರು ಸಾವಿಗೀಡಾಗುತ್ತಿದ್ದರು. ಸಾವಿನ ಭಯ ಇದ್ದರೂ ಜನರು ಹಳಿಗಳನ್ನು ದಾಟುತ್ತಿದ್ದರು. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೆ ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬಹುದಿತ್ತು. ಆದರೆ, ಈ ಸಮಸ್ಯೆ ಪರಿಹಾರಿಸಲು ಅಧ್ಯಯನ ಕೈಗೊಂಡ ಸಂಸ್ಥೆಯು ಕೆಳಸೇತುವೆ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡದೆಯೇ ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ಯಶಸ್ವಿಯಾಯಿತು. ರೈಲ್ವೆ ಹಳಿಗಳ ಮೇಲೆ ಜೀಬ್ರಾ ಕ್ರಾಸ್ ಮಾದರಿಯಲ್ಲಿ ಹಳದಿ ಪಟ್ಟಿಯನ್ನು ನಿರ್ದಿಷ್ಟ ಅಡಿಗಳ ಅಂತರದಲ್ಲಿ ಬಳಿಯಲಾಯಿತು. ಹೀಗಾಗಿ ಜನರಿಗೆ ರೈಲು ಎಷ್ಟು ದೂರದಲ್ಲಿ ಬರುತ್ತಿದೆ, ಎಷ್ಟು ವೇಗದಲ್ಲಿ ಬರುತ್ತಿದೆ ಎಂದು ಹಳದಿಪಟ್ಟಿಯಿಂದ ಅಂದಾಜಿಸಲು ಸಾಧ್ಯವಾಯಿತು. ಹೀಗಾಗಿ ಸಾವಿನ ಪ್ರಮಾಣ ಶೇ.75 ರಷ್ಟು ತಗ್ಗಿದೆ. ಈ ರೀತಿ ನಾವು ಹೊಸ ದೃಷ್ಟಿಕೋನದಲ್ಲಿ ಆಲೋಚನೆ ಮಾಡಲು ಸಾಧ್ಯವಾದರೆ ಸಮಸ್ಯೆಗೆ ಉತ್ತಮ ಪರಿಹಾರವನ್ನೇ ಪಡೆದುಕೊಳ್ಳಬಹುದು ಎಂದರು.
ಹಲವರಿಗೆ ಹಲವು ಕಡೆಗಳಲ್ಲಿ ಸ್ಫೂರ್ತಿ ದೊರೆಯುತ್ತದೆ. ಆ ಸ್ಫೂರ್ತಿಹಿಂದ ಹೊಸ ಆವಿಷ್ಕಾರಕ್ಕೆ ಮುಂದಾಗಬೇಕು. ನೀವು ಕೈಗೊಳ್ಳುವ ಆವಿಷ್ಕಾರದ ಫಲಿತಾಂಶ ತಕ್ಷಣ ದೊರೆಯಬೇಕೆಂದೇನು ಇಲ್ಲ, ಹಲವಾರು ಬಾರಿ ಸೋಲುಗಳು ಉಂಟಾಗಬಹುದು. ಎಷ್ಟೇ ಸೋಲು ಗಳು ಎದುರಾದರೂ ಮತ್ತೆ ಪ್ರಯತ್ನ ಮುಂದುವರೆಸಿದರೆ ಅಂತಿಮವಾಗಿ ಗೆಲುವು ನಿಶ್ಚಿತ. ವ್ಯಾಕ್ಯೂಮ್ ಕ್ಲೀನರ್ ಕಂಪನಿಯೊಂದು ವ್ಯಾಕ್ಯೂಮ್ ಕ್ಲೀನರ್‌ನ ಡಿಸೈನ್ ಸಿದ್ಧಪಡಿಸಲು ಬರೋಬ್ಬರಿ 5,126 ಬಾರಿ ಪ್ರಯತ್ನ ನಡೆಸಿತು. 5,125 ಬಾರಿ ರೂಪಿಸಿದ ಡಿಸೈನ್‌ಗಳನ್ನು ಆ ಕಂಪನಿ ತಿರಸ್ಕರಿಸಿ 5,126 ತಯಾರಿಸಿದ ಅತ್ಯುತ್ತಮ ಡಿಸೈನ್‌ಅನ್ನು ಆಯ್ಕೆ ಮಾಡಿಕೊಂಡು ಮಾರುಕಟ್ಟೆಯಲ್ಲಿ ಯಶಸ್ಸು ಕಂಡಿತು ಎಂದರು.