ಶಾಲಾ ಶೌಚಗೃಹ ಸ್ವಚ್ಛತೆಗೆ ಶಾಶ್ವತ ಪರಿಹಾರ; ರಾಜ್ಯ ಸರ್ಕಾರ ಗಂಭೀರ ಚಿಂತನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

31 tth 01
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತಿಗಾರು ಸರ್ಕಾರಿ ಪ್ರೌಢಶಾಲೆಯ ನೂತನ ಕೊಠಡಿಗಳ ಉದ್ಘಾಟಿಸಿದರು. ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಇತರರಿದ್ದರು.
Published on

ತೀರ್ಥಹಳ್ಳಿ: ಶಾಲಾ ಶೌಚಗೃಹಗಳ ಸ್ವಚ್ಛತೆಯ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಸಿಂಗನಬಿದಿರೆ ಗ್ರಾಪಂ ವ್ಯಾಪ್ತಿಯ ಮತ್ತಿಗಾರು ಸರ್ಕಾರಿ ಪ್ರೌಢಶಾಲೆಯ ನೂತನ ಕೊಠಡಿಗಳ ಉದ್ಘಾಟನೆಯನ್ನು ನೆರವೇರಿಸಿದ ಅವರು, ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ದೌರ್ಭಾಗ್ಯ ವಿದ್ಯಾರ್ಥಿಗಳಿಗೆ ಎಂದಿಗೂ ಬರಬಾರದು. ಈ ಕೆಲಸಕ್ಕೆ ನಿಗದಿತ ಸಿಬ್ಬಂದಿ ಇಲ್ಲವಾಗಿರುವ ಕಾರಣ ಈ ಸ್ಥಿತಿ ಎದುರಾಗಿದೆ. ಇದಕ್ಕೆ ಯಾರನ್ನೂ ಹೊಣೆ ಮಾಡುವುದು ಕಷ್ಟದ ಕೆಲಸ ಎಂದು. ಗ್ರಾಪಂ ಹಾಗೂ ಶಾಲಾಭಿವೃದ್ಧಿ ಸಮಿತಿ ಸಹ ಸ್ವಚ್ಛತೆ ಸೇರಿದಂತೆ ಶಾಲೆಗಳ ಮೂಲ ಸೌಕರ್ಯಗಳ ಕಡೆಗೆ ಗಮನ ಹರಿಸಬೇಕಿದೆ ಎಂದರು.
ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಒಂದರಿಂದ ದ್ವಿತೀಯ ಪಿಯುಸಿ ತರಗತಿವರೆಗಿನ ಮಕ್ಕಳಿಗೆ ಯಾವುದೇ ಕೊರತೆ ಆಗಕೂಡದು. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಒಳಗೆ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸಲು ಬದ್ಧನಾಗಿದ್ದೇನೆ. ದಶಕಗಳಿಂದ ನನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಮತ್ತು ಬಗರ್ ಹುಕುಂ ಸಮಸ್ಯೆಯನ್ನು ಬಗೆಹರಿಸಲು ನಮ್ಮ ಸರ್ಕಾರ ನಿರ್ಧಾರ ಕೈಗೊಂಡಿರುವುದಾಗಿಯೂ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಬದ್ಧತೆಯಿಂದ ಕಾರ್ಯನಿರ್ವಹಿಸುವ ಶಿಕ್ಷಕರು ಮತ್ತು ಕ್ರಿಯಾಶೀಲ ಶಾಲಾಭಿವೃದ್ಧಿ ಸಮಿತಿ ಇರುವ ಶಾಲೆಗಳ ನಿರ್ವಹಣೆ ಮತ್ತು ಫಲಿತಾಂಶ ಕೂಡಾ ಉತ್ತಮವಾಗಿರುತ್ತದೆ. 15 ವರ್ಷಗಳ ಹಿಂದೆ ಆರಂಭಗೊಂಡಿರುವ ಈ ಶಾಲೆಯ ಫಲಿತಾಂಶ ಮಾತ್ರವಲ್ಲದೇ ಕ್ರೀಡಾ ಚಟುವಟಿಕೆ ಕೂಡಾ ಉತ್ತಮವಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನ ಯೋಜನೆಗಳನ್ನು ಜಾರಿ ಮಾಡಿರುವುದರಿಂದ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿವೆ. ಶಾಸಕರಾದ ನಮಗೂ ಹೆಚ್ಚು ತಲೆನೋವಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಎಸ್‌ಡಿಎಂಸಿಸಿ ಅಧ್ಯಕ್ಷ ಟಿ.ಡಿ.ಆನಂದ್, ಸಿಂಗನಬಿದಿರೆ ಗ್ರಾಪಂ ಅಧ್ಯಕ್ಷ ಆರ್.ನವೀನ್, ಉಪಾಧ್ಯಕ್ಷೆ ಸುಜಾತಾ, ಸದಸ್ಯರಾದ ತಿಮ್ಮಪ್ಪ, ಸಂದೇಶ್, ಕುಸುಮಾ, ತಾಪಂ ಮಾಜಿ ಸದಸ್ಯ ಬೇಗುವಳ್ಳಿ ಕವಿರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net