

ಕುಮಟಾ: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅರಣ್ಯ ಭೂಮಿ ಹಕ್ಕು ಮತ್ತು ಕಸ್ತೂರಿ ರಂಗನ್ ವರದಿಯ ಆತಂಕಕ್ಕೆ ಶಾಶ್ವತ ಪರಿಹಾರ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪಟ್ಟಣದ ಮಹಾಸತಿ ಸಭಾಭವನದಲ್ಲಿ ಅರಣ್ಯ ಹೋರಾಟಗಾರರ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ನವೆಂಬರ್ 7 ರಂದು ಬೆಂಗಳೂರು ಚಲೋ ಕುರಿತು ಪೂರ್ವಭಾವಿಯಾಗಿ ಅರಣ್ಯವಾಸಿಗಳ ಸಭೆಯಲ್ಲಿ ಅವರು ಮಾತನಾಡಿದರು. ಒಂದೆಡೆ ಭೂಮಿ ಹಕ್ಕಿನಿಂದ ವಂಚಿತವಾಗುವ ಸಂದರ್ಭ ಅರಣ್ಯವಾಸಿಗಳಿಗೆ ಬಂದಿದೆ. ಇನ್ನೊಂದೆಡೆ ಕಸ್ತೂರಿ ರಂಗನ್ ವರದಿ ಜಾರಿಯಿಂದ ಅವರೆಲ್ಲರ ಬದುಕು ನಾಶವಾಗುವ ಆತಂಕ ಎದುರಾಗಿದೆ. ಇವೆರಡು ಸಮಸ್ಯೆಗಳ ವಿರುದ್ಧ ಕಾನೂನು ಮತ್ತು ಸಾಂಘಿಕ ಹೋರಾಟ ಅನಿವಾರ್ಯವಾಗಿದೆ. ಹೋರಾಟಗಾರರ ವೇದಿಕೆಯಿಂದ ಕುಮಟಾ ತಾಲೂಕಿನಲ್ಲಿ ಸುಮಾರು 3000 ಅರಣ್ಯವಾಸಿಗಳಿಗೆ ಉಚಿತವಾಗಿ ಕಾನೂನು ನೆರವು ನೀಡಿ, ಅಸಮರ್ಪಕ ಜಿಪಿಎಸ್ ವಿರುದ್ಧ ಅಪೀಲು ಸಲ್ಲಿಸಿದೆ ಎಂದರು.
ಗಜಾನನ ಪಟಗಾರ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ಅಂಕೋಲಾ, ಅರವಿಂದ ಗೌಡ ಅಂಕೋಲ, ಕುಸಂಬಿ ಖಾನ್, ಜಗದೀಶ ಹರಿಕಂತ್ರ, ಶಂಕರ ಗೌಡ ಕಂದೊಳ್ಳಿ, ಸೀತಾರಾಮ ನಾಯ್ಕ ಮಾತನಾಡಿದರು.
ಪ್ರಕಾಶ ನಾಯ್ಕ ಕತಗಾಲ, ಗಣಪತಿ ಮರಾಠಿ ಕಳವೆ, ಸುನೀಲಾ ಹರಿಕಂತ್ರ ಕಡ್ಲೆ, ಅಯುಬ್ ಉಮರ್ ಬೆಟ್ಕುಳಿ, ಜಗದೀಶ ನಾಯ್ಕ ಹೆಬೈಲ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.