

ಮೈಸೂರು: ಐದು ಗ್ಯಾರಂಟಿ ಯೋಜನೆಯ ಅನುಷ್ಠಾನದೊಂದಿಗೆ ರಾಜ್ಯ ಆರನೇಯದಾಗಿ ವಸತಿಹೀನರಿಗೆ ಶಾಶ್ವತ ಸೂರು ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ರಾಜೀವ್ ಗಾಂಧಿ ವಸತಿ ನಿಗಮ, ಜಿಲ್ಲಾಡಳಿತ, ಮೈಸೂರು ನಗರ ಪಾಲಿಕೆ ಸಹಯೋಗದಲ್ಲಿ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಮೈದಾನದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ)ಯಡಿ ಕೃಷ್ಣರಾಜ ಮತ್ತು ವರುಣ ಕ್ಷೇತ್ರದ ವಸತಿ ರಹಿತ ಫಲಾನುಭವಿಗಳಿಗೆ ಗುಂಪುಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 1.8 ಲಕ್ಷ ಮನೆ, ರಾಜೀವ್ ಗಾಂಧಿ ವಸತಿ ನಿಗಮದಿಂದ 53,000 ಮನೆ ನಿರ್ಮಿಸುವ ಗುರಿ ಹೊಂದಲಾಗಿದ್ದು, ವಿವಿಧ ವಸತಿ ಯೋಜನೆಯಡಿ ಮುಂದಿನ ವರ್ಷದೊಳಗೆ ರಾಜ್ಯದಲ್ಲಿ 2.23 ಲಕ್ಷ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 36,000 ಮನೆ ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಮತ್ತೆ 48,000 ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರಾಜ್ಯದಲ್ಲಿ 5 ವರ್ಷದಲ್ಲಿ ಬಿಜೆಪಿ ಮತ್ತು ಸಮ್ಮಿಶ್ರ ಸರ್ಕಾರದಿಂದ ನಿರಾಶ್ರಿತರಿಗೆ ಒಂದು ನಿವೇಶನವೂ ಹಂಚಿಕೆಯಾಗಿಲ್ಲ ಎಂದು ಆರೋಪಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೃಷ್ಣರಾಜ ಕ್ಷೇತ್ರದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಿ ಬಗೆಹರಿಸಿದ್ದಾರೆ. ಜತೆಗೆ ವರುಣ ಕ್ಷೇತ್ರದ ವಸತಿರಹಿತರಿಗೂ ನಿವೇಶನ ನೀಡುತ್ತಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೆ.ಆರ್. ಕ್ಷೇತ್ರದ ವಸತಿರಹಿತರಿಗೆ ವರುಣ ಕ್ಷೇತ್ರದಲ್ಲಿ ಸೂರು ಕಲ್ಪಿಸಲು ಈ ಹಿಂದಿನ ಬಿಜೆಪಿ ಸರ್ಕಾರ ಮುಂದಾಗಿತ್ತು. ಈ ಬಗ್ಗೆ ವಿರೋಧವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ತಡೆ ಹಿಡಿಯಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವರುಣ ಕ್ಷೇತ್ರದ ವಸತಿರಹಿತರಿಗೂ ಇಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಹೇಳಿದರು.
ಸರ್ಕಾರವಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಬಡವರಿಗಾಗಿ ಕಟ್ಟಿದ್ದು, ಈಗ ಕೃಷ್ಣರಾಜ, ವರುಣ ಕ್ಷೇತ್ರದ ಫಲಾನುಭವಿಗಳಿಗೆ ಮನೆ ಕಟ್ಟಿಕೊಡಲಾಗುವುದು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವರುಣ ಕ್ಷೇತ್ರಕ್ಕೆ ವಸತಿ ಸಚಿವರು 3 ಸಾವಿರ ಮನೆ ಮಂಜೂರು ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಬಡವರ ಪರ, ರೈತರ ಪರ, ದೀನ ದಲಿತರ ಪರವಿರುವ ಸರ್ಕಾರವಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಸಮಿತಿಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಮುಡಾ ಅಧ್ಯಕ್ಷ ಕೆ.ಮರೀಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ರಾಜೀವ್‌ಗಾಂಧಿ ವಸತಿ ನಿಗಮದ ಎಂಡಿ ಎನ್.ಸುಶೀಲಮ್ಮ, ಪಾಲಿಕೆ ಆಯುಕ್ತೆ ಡಾ.ಎನ್.ಎನ್.ಮಧು ಇದ್ದರು.
ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಲಲಿತಾದ್ರಿಪುರದ 13.5 ಎಕರೆ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಎಸ್9 ಮಾದರಿಯಲ್ಲಿ 1140 ಮನೆ ನಿರ್ಮಾಣವಾಗಲಿದ್ದು, ಅದರಲ್ಲಿ ಕೃಷ್ಣರಾಜ ಕ್ಷೇತ್ರದ ಫಲಾನುಭವಿಗಳಿಗೆ 940 ಮತ್ತು ವರುಣ ಕ್ಷೇತ್ರದ ಫಲಾನುಭವಿಗಳಿಗೆ 500 ಮನೆಗಳು ಹಂಚಿಕೆಯಾಗಲಿದೆ.