

ಸೋಮವಾರಪೇಟೆ: ರೋಟರಿ ಸಂಸ್ಥೆ ಸ್ಥಳೀಯ ಜನರ ಸಮಸ್ಯೆಗಳ ಪರಿಹಾರಕ್ಕೆ ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡಲ್ಲಿ ಪ್ರಯೋಜನ ಜನರಿಗೆ ಸಿಗಲಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಎಚ್.ಆರ್.ಕೇಶವ್ ಹೇಳಿದರು.
ಇಲ್ಲಿನ ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಕರ್ಕಳ್ಳಿ ರೋಟರಿ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಾಂತಪಾಲರ ಭೇಟಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದ ಸೇವಾ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ರೋಟರಿ ಪ್ರತಿವರ್ಷ ಸಮಾಜಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ರೋಟರಿಗೆ ಕೊಟ್ಟ ಹಣ ನಿಜವಾದ ಬಡವರಿಗೆ ತಲುಪುತ್ತದೆ. ದುಡಿದ ಹಣದಲ್ಲಿ ಒಂದಷ್ಟನ್ನು ದಾನ ಮಾಡಬೇಕು ಎಂದು ಹೇಳಿದರು.
ಸಹಾಯಕ ಪ್ರಾಂತಪಾಲ ಎಂ.ಡಿ. ಲಿಖಿತ್ ಮಾತನಾಡಿ, ರೋಟರಿ ಸಂಸ್ಥೆಯಿಂದ ಸಮಾಜದಲ್ಲಿ ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯದ ಪ್ರಯೋಜನಗಳು ಒಂದಿಲ್ಲೊಂದು ರೀತಿಯಲ್ಲಿ ನಮಗೆ ವಾಪಾಸ್ ಸಿಗುತ್ತಿದೆ. ದೀರ್ಘಾವಧಿಯವರೆಗೆ ಜನರ ಸೇವೆಗೆ ದೊರಕುವಂತಹ ಯೋಜನೆಗಳನ್ನು ಮಾಡಬೇಕಿದೆ ಎಂದು ಹೇಳಿದರು.
ರೋಟರಿ ಅಧ್ಯಕ್ಷ ವಸಂತ್ ನಂಗಾರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚೇತನ್ ಚಂದ್ರಾಜು, ವಲಯ ಸೇನಾನಿ ಉಲ್ಲಾಸ್ ಕೃಷ್ಣ, ಮುಂದಿನ ಸಾಲಿನ ಅಧ್ಯಕ್ಷ ಜೆ.ಕೆ. ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ ಇದ್ದರು.