

ಹನೂರು: ವೀರಾವೇಶದ ವೀರಗಾಸೆ ನೃತ್ಯ, ಡೊಳ್ಳು ಕುಣಿತ, ಕೀಲು ಕುದುರೆ ನೃತ್ಯ, ಭಕ್ತಿ ಭಾವದ ಕಂಸಾಳೆ ನೃತ್ಯ ಮುಂತಾದ ಕಲಾ ತಂಡಗಳ ಪ್ರದರ್ಶನ ನೋಡುಗರ ಮನಸೂರೆಗೊಂಡವು.
ಇದು ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶನಿವಾರ ಅಯೋಜಿಸಿದ್ದ ಗಡಿನಾಡು ಕನ್ನಡ ಉತ್ಸವದ ಜನಪದ ಪ್ರಕಾರಗಳ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳು.
ಮಹದೇಶ್ವರ ಬೆಟ್ಟದ ಪೆಟ್ರೋಲ್ ಬಂಕ್ ವೃತ್ತದ ಬಳಿ ಅಶ್ವರೂಢ ವಾಹನದಲ್ಲಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಸರ್ಕಾರಿ ನೌಕರರ ಸಮ್ಮುಖದಲ್ಲಿ ಜನಪದ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಪೆಟ್ರೋಲ್ ಬಂಕ್‌ನಿಂದ ಹೊರಟ ಮೆರವಣಿಗೆಯು ಬಸ್ ನಿಲ್ದಾಣದ ಮುಖ್ಯ ರಸ್ತೆ, ಆಸ್ಪತ್ರೆ, ಪ್ರಾಧಿಕಾರದ ಕಚೇರಿ ರಸ್ತೆಯ ಮೂಲಕ ಸಾಗಿ ಮಾದಪ್ಪನ ದೇವಸ್ಥಾನದಲ್ಲಿ ಅಂತ್ಯಗೊಂಡಿತು. ಈ ವೇಳೆ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ಭಕ್ತರು ಕಲಾತಂಡಗಳ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ಕಂಸಾಳೆ ನೃತ್ಯ, ಡೊಳ್ಳು ಕುಣಿತ, ಕೀಲು ಕುದುರೆ ನೃತ್ಯ ಎಲ್ಲರ ಗಮನ ಸೆಳೆದದ್ದು ಒಂದೆಡೆಯಾದರೆ, ನಗಾರಿ ತಮಟೆಗಳ ಶಬ್ದ ಮೆರವಣಿಗೆಗೆ ಮೆರುಗು ತಂದಿತು. ಈ ಮೂಲಕ ಜನಪದ ನೃತ್ಯದ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು.