ಸಂಸ್ಕಾರದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಸಾಧ್ಯ

Hrr24Kanaka1
Published on

ಹರಿಹರ: ಶಿಕ್ಷಣದ ಜತೆಯಲ್ಲೇ ಮಕ್ಕಳಿಗೆ ಸಂಸ್ಕಾರ ಹಾಗೂ ಪರಂಪರೆ ಕಲಿಸಿದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಶ್ರೀಗಳು ಅಭಿಪ್ರಾಯಪಟ್ಟರು.

ಬೆಳ್ಳೂಡಿ ಕನಕ ಶಾಖಾ ಮಠದ ಸಮುದಾಯ ಭವನದಲ್ಲಿ ಭಾನುವಾರ ಹರಿಹರ ತಾಲೂಕಿನ ಕನಕ ನೌಕರರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೋಷಕರು ತಮ್ಮ ಆಸೆಯಂತೆ ಮಕ್ಕಳಿಗೆ ಶಿಕ್ಷಣ ಪಡೆಯುವಂತೆ ಒತ್ತಡ ಹಾಕುತ್ತಿರುವುದು ಸರಿಯಲ್ಲ ಇದರಿಂದ ಮಕ್ಕಳು ಅವಶ್ಯಕತೆ ಇರುವುದನ್ನು ಬಿಟ್ಟು ಅನವಶ್ಯಕ ಕಲಿಕೆಯಿಂದ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳ ಆಸೆಯಂತೆ ನೀವುಗಳು ಶಿಕ್ಷಣವನ್ನು ನೀಡಿದಲ್ಲಿ ಭವಿಷ್ಯದಲ್ಲಿ ಮನೆಗೆ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗುತ್ತಾನೆ ಎಂದ ಶ್ರೀಗಳು ಅಂಕಕ್ಕೆ ಮಹತ್ವ ನೀಡದೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪೋಷಕರು ಮಾಡಬೇಕಾಗಿದೆ ಎಂದು ಹೇಳಿದರು.

ವಿದ್ಯಾಭ್ಯಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅನ್ಯ ವಿಷಯಗಳ ಕಡೆ ಗಮನ ಹರಿಸದೆ ಶಿಕ್ಷಣ ಕಡೆ ಹೆಚ್ಚಿನ ಒತ್ತು ನೀಡಬೇಕು. ಅಧ್ಯಯನದಲ್ಲಿ ಪ್ರಾಮಾಣಿಕ ಪ್ರಯತ್ನ ಇದ್ದರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವಿವಿ ಕುಲಸಚಿವ ಡಾ. ಬಸವರಾಜ್.ಎಲ್. ಲಕ್ಕಣ್ಣವರ್ ಮಾತನಾಡಿ, ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಪ್ರತಿಭೆ ಗುರುತಿಸದಿದ್ದರೆ ಪ್ರತಿಭೆ ನಾಶ ಆಗುತ್ತದೆ. ಇಂತಹ ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜ ಸಂಘಟನೆ ಮಾಡಬೇಕಿದೆ ಎಂದರು.

ಉನ್ನತ ಶಿಕ್ಷಣ ಪಡೆಯುವಲ್ಲಿ ನಮ್ಮ ಸಮುದಾಯ ಹಿಂದೆ ಉಳಿದಿದೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಕಡೆ ಗಮನ ಹರಿಸಿದಾಗ ಸಮಾಜ ಶೈಕ್ಷಣಿಕ ಹಾಗು ಆರ್ಥಿಕವಾಗಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ನಿಂಬಕ್ಕ ನಿಂಗಪ್ಪ ಚಂದಾಪುರ, ಸಂಘದ ಅಧ್ಯಕ್ಷ ಕೆ. ಲಕ್ಷ್ಮಣ್, ಪಿ.ಆರ್ ರಾಮಕೃಷ್ಣಪ್ಪ, ಜೀವರಾಜ್ ಛತ್ರದ, ಇನ್ಸ್‌ಪೆಕ್ಟರ್ ಕೆ.ಎಸ್.ದೇವೇಂದ್ರಪ್ಪ, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷರಾದ ರಾಜಶೇಖರಪ್ಪ, ರಾಮಕೃಷ್ಣ ಆಸ್ಪತ್ರೆಯ ಡಾ. ಮಹೇಶ್, ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಶಿವಾನಂದ ದಳವಾಯಿ, ಖಜಾಂಚಿ ಗಣೇಶ್, ತಾಪಂ ಮಾಜಿ ಅಧ್ಯಕ್ಷರಾದ ಐರಣಿ ಅಣ್ಣೇಶ್, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಶರಣ ಕುಮಾರ್ ಹೆಗಡೆ, ಡಾ. ಚಂದ್ರಮೋಹನ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net