

ಹುಬ್ಬಳ್ಳಿ: ಇತಿಹಾಸ ಪುಟದಲ್ಲಿ ರಕ್ತಕ್ರಾಂತಿಗಿಂತ ಶಾಂತಿಕ್ರಾಂತಿ ಹೆಚ್ಚು ಶ್ರೇಷ್ಠವಾಗಿ ದಾಖಲಾಗಿದೆ. ಶಾಂತಿಯಿಂದ ಯಾವುದೇ ಹಬ್ಬ, ಹರಿದಿನ ಆಚರಿಸಿದರೆ ಮನಸ್ಸು ನೆಮ್ಮದಿಯಿಂದ ಕೂಡಿರಲಿದೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ತಿಳಿಸಿದರು.
ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಹಬ್ಬದ ಸೌಹಾರ್ದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸೌಹಾರ್ದತೆ ಬರಬೇಕಾದರೆ ಭಾವನೆ ದಷ್ಟಪುಷ್ಟವಾಗಿರಬೇಕು. ಹೃದಯಕ್ಕೆ ಒಳ್ಳೆಯ ಸಂಸ್ಕಾರ, ಬುದ್ಧಿ ಶ್ರೇಷ್ಠ, ಮನಸ್ಸು ವಿಕಾಸಗಿರಬೇಕು. ಸೌಹಾರ್ದತೆ ಇದ್ದಾಗ ಮಾತ್ರ ಶಾಂತಿ ನೆಲೆಸುತ್ತದೆ. ಜಗತ್ತು ಹಾತೊರಿಯುತ್ತಿರುವುದು ಶಾಂತಿ ಮತ್ತು ಸೌಹಾರ್ದತೆಗಾಗಿ ಎಂದರು.
ಮುಸ್ಲಿಂ ಧರ್ಮಗುರು ತಾಜುದ್ದೀನ್ ಖಾದ್ರಿ ಪೀರಾ ಮಾತನಾಡಿ, ಶಾಂತಿ ಸಲುವಾಗಿಯೇ ಹಬ್ಬವನ್ನು ಆಚರಿಸಲಾಗುತ್ತಿದೆ. ಇದಕ್ಕಿಂತ ಖುಷಿ ಮತ್ತೊಂದು ಇಲ್ಲ. ಈ ವಿಚಾರದಲ್ಲಿ ಎಲ್ಲ ಧರ್ಮೀಯರ ಸಹಭಾಗಿತ್ವ ಅತ್ಯಗತ್ಯ ಎಂದರು.
ಕ್ರಿಶ್ಚಿಯನ್ ಧರ್ಮಗುರು ಫಾದರ್ ಡಾ. ಸುಧೀರ ಮಾತನಾಡಿ, ಎಲ್ಲ ಧರ್ಮಕ್ಕಿಂತ ಮಾನವೀಯ ಧರ್ಮ ದೊಡ್ಡದು. ಆದರೆ, ಮಾನವೀಯತೆ ಮರೆದು ಮರ್ಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕಾಲ ಕೆಟ್ಟಿಲ್ಲ, ನಾವು ಕೆಟ್ಟಿದ್ದೇವೆ. ನಾವು ಬದಲಾಗಿ ಬಾಂಧವ್ಯ ಬೆಸೆಯುವ ಹಬ್ಬ ಆಚರಿಸಬೇಕು ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದುವರಿಗಿನ ಗಣೇಶ ಹಬ್ಬ, ಈದ್‌ಮಿಲಾದ್ ಶಾಂತಿ ಮತ್ತು ಸಂಭ್ರಮದಿಂದ ಆಚರಿಸಲಾಗಿದೆ. ಈಗ ನಡೆಯುವ ಹೋಳಿ ಮತ್ತು ರಂಜಾನ್ ಹಬ್ಬವನ್ನೂ ಎಲ್ಲರೂ ಸಂಭ್ರಮದಿಂದ ಆಚರಿಸಬೇಕು. ನಮ್ಮ ಹುಬ್ಬಳ್ಳಿಯನ್ನು ನಾವೇ ಬೆಳೆಸಬೇಕು. ಎಲ್ಲರ ಸಹಕಾರವಿದ್ದಾಗ ಮಾತ್ರ ಇಂಥ ಸಾಧನೆ ಸಾಧ್ಯ ಎಂದರು.
ಶಿಖ್ ಧರ್ಮಗುರು ಗ್ಯಾನಿ ಗುಣವಂತ ಸಿಂಗ್, ಮಲ್ಲೇಶಪ್ಪ ಹೆಬಸೂರ, ಮಾಜಿ ಶಾಸಕ ಅಶೋಕ ಕಾಟವೆ, ಮಹೇಂದ್ರ ಸಿಂಘಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಶಹರ ತಹಸೀಲ್ದಾರ ಕಲಗೌಡ ಪಾಟೀಲ, ಇಇ ವಿಠ್ಠಲ ತುಬಾಕೆ, ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ, ಯಲ್ಲಪ್ಪ ಕಾಶಪ್ಪನವರ, ಇತರರು ಇದ್ದರು.