

ಕುಂದಾಪುರ: ಕ್ರಾಂತಿ ಮೂಲಕ ಬದಲಾವಣೆ ಆದರೆ ಈ ದೇಶ ಒಡೆದು ಚೂರಾಗುತ್ತದೆ. ಶಾಂತಿ ಸೌಹಾರ್ದ ಮರೆಯಾಗುತ್ತದೆ. ನಾವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕಷ್ಟಕ್ಕೆ ಸ್ಪಂದಿಸುವ ಮನೋಭಾವಗಳನ್ನು ಹೊಂದಿರಬೇಕು. ಅಕ್ರಮವಾಗಿ ಗಳಿಸಿದ ಹಣದಿಂದ ಎಂದಿಗೂ ನೆಮ್ಮದಿ ಸಾಧ್ಯವಿಲ್ಲ. ವ್ಯಕ್ತಿತ್ವದಲ್ಲಿ ತೃಪ್ತಿ ಎನ್ನುವ ಮೌಲ್ಯವನ್ನು ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಕುಂದಾಪುರದ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಬರುವ ಮೊದಲೇ ಸಮಾಜದಲ್ಲಿ ಕೆಲವು ಮೌಲ್ಯಗಳಿದ್ದವು. ಜನರು ಅದಕ್ಕೆ ಗೌರವ ನೀಡುತ್ತಿದ್ದರು. ಆದರೆ ಈಗ ಆ ಸಮಾಜ ಬದಲಾಗಿದೆ. ಶ್ರೀಮಂತರಿಗೆ ಮಣೆ ಹಾಕುವ ಪ್ರವೃತ್ತಿ ತಾಂಡವವಾಡುತ್ತಿದೆ. ಪ್ರಾಮಾಣಿಕತೆಗೆ, ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದರು.
ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟುವುದಕ್ಕೆ ನಮ್ಮ ಯುವಕರನ್ನು ಸೃಷ್ಟಿ ಮಾಡಬೇಕು ಎಂಬ ಪಣ ತೊಟ್ಟು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಹಿರಿಯ ವಯಸ್ಸಿನಲ್ಲಿಯೂ ಅವರ ಉತ್ಸಾಹ, ದೇಶಪ್ರೇಮ, ಮುಂದಿನ ಜನಾಂಗದ ಬಗ್ಗೆ ಕಾಳಜಿ ಅನುಕರಣೀಯವಾದುದು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್‌ಕುಮಾರ್ ನಿರೂಪಿಸಿದರು.
ಸಂತೋಷ್ ಹೆಗ್ಡೆ ದೇಶದಲ್ಲಿನ ಭ್ರಷ್ಟಾಚಾರ, ಅನ್ಯಾಯಗಳ ವಿರುದ್ಧ ದನಿ ಎತ್ತಿದವರು. ನಿವೃತ್ತಿ ಜೀವನದಲ್ಲಿಯೂ ಕೈ ಕಟ್ಟಿ ಕುಳಿತವರಲ್ಲ. ಈ ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದೆ ಎಂದು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಪ್ಪುಗಳನ್ನು ತಿದ್ದಿಕೊಳ್ಳುವಂತಹ ಗುಣ ಬೆಳೆಸಿಕೊಳ್ಳಬೇಕು. -ಪ್ರತಾಪ್ ಚಂದ್ರ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ https://www.vijayavani.net/profit-of-rs-41-96-lakh-13-dividend-for-members https://www.vijayavani.net/talent-award-at-amrutha-bharathi-vidyalaya