ಸತ್ಯದ ದಾರಿಯಲ್ಲಿ ನಡೆದರೆ ನೆಮ್ಮದಿ ಜೀವನ ಸಾಧ್ಯ

MDG1
Published on

ಮೂಡಿಗೆರೆ: ಸಾಮೂಹಿಕವಾಗಿ ಸರಳ ರೀತಿಯಲ್ಲಿ ಮದುವೆಯಾಗಿರುವ ಜೋಡಿಗಳು ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿದವರು. ತಾವು ದುಡಿದ ಸಂಪನ್ಮೂಲವನ್ನು ಹರಿಯುವ ನೀರಿನಂತೆ ಖರ್ಚು ಮಾಡಿ ಮದುವೆ ಮಾಡುವವರ ಮಧ್ಯದಲ್ಲಯೂ ಸರಳ ರೀತಿಯಲ್ಲಿ ವಿವಾಹವಾಗಿರುವ ನೂತನ ದಂಪತಿಗಳು, ಸತ್ಯದ ಹಾದಿಯಲ್ಲಿ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಬೇಕು ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.

ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿಯಿಂದ ನಡೆದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕೋಟ್ಯಾಂತರ ರೂ. ಖರ್ಚು ಮಾಡಿ ಅದ್ದೂರಿಯಿಂದ ನಡೆದ ಕೆಲವೊಂದು ವಿವಾಹಗಳು ಒಂದೇ ವಾರದಲ್ಲಿ ವಿಚ್ಛೇದನ ಹಂತಕ್ಕೆ ಬಂದಿರುವ ಉದಾಹರಣೆಗಳಿವೆ. ಅದು ಒಳ್ಳೆಯ ಬೆಳವಣಿಗೆಯಲ್ಲ. ಸುಳ್ಳು, ವ್ಯಭಿಚಾರಕ್ಕೆ ಸಮವಾಗಿದೆ, ಸುಳ್ಳಿನಿಂದ ಮಾನಸಿಕ ಒತ್ತಡ ಉಂಟಾಗಿ ಸಂಬಂಧಗಳಲ್ಲಿ ಒಡಕು ಮೂಡುತ್ತದೆ. ಸತ್ಯದ ದಾರಿಯಲ್ಲಿ ನಡೆದರೆ ನೆಮ್ಮದಿ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಬಡವರು ಸಾಲಮಾಡಿ ಅದನ್ನು ತೀರಿಸಲು ಜೀವನ ಪರ್ಯಂತ ಒದ್ದಾಡುವುದನ್ನು ನಾವು ಕಾಣುತ್ತೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ನವ ಜೋಡಿಗಳ ಪಾಲಕರನ್ನು ತಪ್ಪಿಸುವ ಉದ್ದೇಶದಿಂದ 27 ವರ್ಷದಿಂದ ತನ್ನ ತಾಯಿ ಮಾಜಿ ಸಚಿವೆ ಮೋಟಮ್ಮ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ನವ ಜೋಡಿಗಳು ಸಮಾಜದಲ್ಲಿ ಮಾದರಿಯ ಜೀವನ ನಡೆಸಬೇಕು ಎಂದು ಹೇಳಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯ ಎಂ.ಎ.ಹಂಝ, ಉದ್ಯಮಿಗಳಾದ ಡಾ.ಪಾರ್ವತಿ ಧನಂಜಯ್, ರೇಣುಕಾ ಲಕ್ಷ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮುಖಂಡರಾದ ಬಿ.ಎಸ್.ಜಯರಾಮ್, ಸುಬ್ರಾಯಗೌಡ, ಬಿ.ಎಂ.ಶಂಕರ್, ಶ್ರೀನಾಥ್, ವೆಂಕಟಮ್ಮ ಹಾಲಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net