

ಚಿಕ್ಕಮಗಳೂರು: ಜಿಲ್ಲೆಯಲ್ಲಿ ತಮಿಳು ಜನಾಂಗ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದೆ. ಒಗ್ಗಟ್ಟಿನ ಪ್ರದರ್ಶನದಿಂದ ಮಾತ್ರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಶ್ರೀ ಸುಬ್ರಹ್ಮಣ್ಯ ಭಾರತಿ ಮಹಾಸಭಾ ತಮಿಳು ಸಂಘದ ಅಧ್ಯಕ್ಷ ಜಿ.ರಘು ತಿಳಿಸಿದರು.
ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಶ್ರೀಸುಬ್ರಹ್ಮಣ್ಯ ಭಾರತಿ ಮಹಾಸಭಾದ ತಮಿಳು ಸಂಘದ ಸದಸ್ಯರುಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಹಲವಾರು ಸಣ್ಣಪುಟ್ಟ ಕೆಲಸಗಳಲ್ಲಿ ತಮಿಳು ಜನಾಂಗದ ಶ್ರಮ ಬಹಳಷ್ಟಿದೆ. ದಿನದ ದುಡಿಮೆಯನ್ನೇ ನಂಬಿಕೊAಡು ಅನೇಕರು ಕಷ್ಟಪಡುತ್ತಿದ್ದಾರೆ. ಇಂದಿಗೂ ತಮಿಳರ ಜನಾಂಗವನ್ನು ಜನಪ್ರತಿನಿಧಿಗಳಾಗಲೀ ಅಥವಾ ಸರ್ಕಾರವಾಗಲೀ ಸಮರ್ಪಕವಾಗಿ ಗುರುತಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮುದಾಯಕ್ಕೆ ತಮಿಳು ಮಾತೃಭಾಷೆಯಾದರೆ, ಕನ್ನಡ ಜೀವನದ ಭಾಷೆಯಾಗಿದೆ. ಅನೇಕ ತಲೆಮಾರುಗಳಿಂದ ತಮಿಳರು ಕನ್ನಡ ನೆಲದಲ್ಲೇ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ರಾಜಕೀಯ ಹಾಗೂ ಸಾಮಾಜಿಕವಾಗಿ ಬೆಳೆಯುವ ಹಂತವನ್ನು ಇಂದಿಗೂ ತಲುಪಿಲ್ಲ. ಸರ್ಕಾರ ಜನಾಂಗವನ್ನು ಕಡೆಗಣಿಸುತ್ತಿದೆ ಎಂದು ದೂರಿದರು.
ಜನಾಂಗದಲ್ಲಿ ಬಹಳಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಕಾರ್ಯಕ್ಕೆ ತುಂಬಾ ಸಮಸ್ಯೆಯಾಗುತ್ತಿದೆ. ಇಂದಿನ ಬೆಲೆಏರಿಕೆ ನಡುವೆ ದುಡಿಮೆಯ ಶೇ. ೧೦೦ರಷ್ಟು ಭಾಗ ಕುಟುಂಬದ ನಿರ್ವಹಣೆಗೆ ಸೀಮಿತವಾಗಿದೆ. ಹೀಗಾಗಿ ಜನಾಂಗಕ್ಕೆ ಸಮುದಾಯ ಭವನ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಕೃಷ್ಣರಾಜ್ ಮಾತನಾಡಿ, ನಗರದ ಆರೇಳು ವಾರ್ಡ್ಗಳಲ್ಲಿ ತಮಿಳು ಜನಾಂಗಗಳ ಸಭೆ ನಡೆಸುವ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯ ಮಾಡಬೇಕಿದೆ. ಇದರಿಂದ ಜನಾಂಗ ಆರ್ಥಿಕವಾಗಿ ಸದೃಢಗೊಳಿಸಲು ಸಾಧ್ಯ. ತಮಿಳರು ಬಲಿಷ್ಟವಾದರೆ ಭವಿಷ್ಯದಲ್ಲಿ ನೆಮ್ಮದಿಯಿಂದ ಜೀವಿಸಬಹುದು ಎಂದರು.
ಆಯಾ ವಾರ್ಡ್ಗಳಲ್ಲಿ ಜನಾಂಗದ ಪಟ್ಟಿ ತಯಾರಿಸಬೇಕು. ಸಂಘಕ್ಕೆ ಸೇರ್ಪಡೆಗೊಳಿಸುವ ಮೂಲಕ ಸರ್ಕಾರದ ಮುಂದೆ ಶಕ್ತಿ ತೋರ್ಪಡಿಸಬೇಕು. ಆಗ ಮಾತ್ರ ಸಾಮಾಜಿಕ ಹಾಗೂ ರಾಜಕೀಯವಾಗಿ ಅವಕಾಶ ಪಡೆದುಕೊಳ್ಳಬಹುದು. ಹೀಗಾಗಿ ಜನಾಂಗದ ಬೆಳವಣಿಗೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಸಮಾಜದ ಮುಖಂಡ ವಿಜಯ್‌ಕುಮಾರ್, ಸಂಘದ ಸಹಕಾರ್ಯದರ್ಶಿ ಸಿ.ಕೆ.ಮೂರ್ತಿ, ಮುಖಂಡರಾದ ಮುರುಗಣ್ಣ, ಮಹಾಲಿಂಗA, ಚಿನ್ನಪ್ಪ, ಸತೀಶ್, ಹರೀಶ್, ಹರಿ, ಸಂತೋಷ್, ಸತ್ಯವತಿ, ಲಕ್ಷ್ಮೀ, ಪಾರ್ವತಿ ಮತ್ತಿತರರಿದ್ದರು.