ಚಡಚಣದಲ್ಲಿ ಬಂದಿಳಿದ ಪೇಲೋಡ್; ಆತಂಕ ಬೇಡ ಎಂದ ಡಿಸಿ

PELOD
ಚಡಚಣ ತಾಲೂಕಿನ ಮರಗೂರ ಬಳಿಯ ಜಮೀನಿನಲ್ಲಿ ಬಿದ್ದಿರುವ ಪೇಲೋಡ್.
Published on

ವಿಜಯಪುರ: ಇದ್ದಕ್ಕಿದ್ದಂತೆ ಆಕಾಶದಿಂದ ಬಂದು ಬಿದ್ದ ಪ್ಯಾರಾಚೂಟ್ ಮಾದರಿಯ ಉಪಕರಣ ಕಂಡು ಜನ ಭಯ, ಆತಂಕ ಮತ್ತು ಕುತೂಹಲಗೊಂಡ ಘಟನೆ ಶುಕ್ರವಾರ ಚಡಚಣ ತಾಲೂಕಿನ ಮರಗೂರ ಬಳಿ ನಡೆದಿದೆ.

ಗ್ರಾಮದ ಜಮೀನೊಂದರಲ್ಲಿ ಬೃಹತ್ ವೈಜ್ಞಾನಿಕ ಉಪಕರಣ ಬೀಳುತ್ತಿದ್ದಂತೆ ಹತ್ತಿರದಲ್ಲಿದ್ದ ಜನ ಗಾಬರಿಯಾಗಿದ್ದಾರೆ. ಬಳಿಕ ಗ್ರಾಮಸ್ಥರಿಗೆ ವಿಷಯ ತಲುಪಿ ಇಡೀ ಊರಿನ ಜನ ಅದನ್ನು ನೋಡಲು ಮುಗಿ ಬಿದ್ದರು. ಬಳಿಕ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಯಿತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದರ ಕುರಿತು ಮಾಹಿತಿ ನೀಡುತ್ತಿದ್ದಂತೆ ಜನ ನಿಟ್ಟುಸಿರು ಬಿಟ್ಟರು.

ಏನಿದು ಪರಿಕರ?

ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಧೀನದಲ್ಲಿನ ಹೈದರಾಬಾದ್ ಮೂಲದ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್) ಹವಾಮಾನ ಹಾಗೂ ವಾತಾವರಣ ಅಧ್ಯಯನಕ್ಕಾಗಿ ಉಡಾವಣೆ ಮಾಡಿದ್ದ ಹವಾಮಾನ ಅಧ್ಯಯನಾಶೀಲ ವೈಜ್ಞಾನಿಕ ಉಪಕರಣ (ಪೇಲೋಡ್ ) ಇದಾಗಿದೆ.

ಪ್ಯಾರಾಚೂಟ್ ನ ನೆರವಿನಿಂದ ಹಾರಿ ಬಿಟ್ಟಿದ್ದ ಈ ಪರಿಕರ ಚಡಚಣ ತಾಲೂಕಿನ ಗ್ರಾಮದಲ್ಲಿ ಪತ್ತೆಯಾಗಿದೆ. ಸಂಬಂಧಿಸಿದ ಸಂಸ್ಥೆಗೆ ಜಿಲ್ಲಾಡಳಿತ ಮಾಹಿತಿ ಕೂಡ ನೀಡಿದೆ. ಸಂಸ್ಥೆಯ ಅಧಿಕಾರಿಗಳ ತಂಡ ಸದ್ಯದಲ್ಲಿಯೇ ವಿಜಯಪುರಕ್ಕೆ ಆಗಮಿಸಲಿದೆ. ಅಲ್ಲದೆ, ಜಮೀನಿನಲ್ಲಿ ಬಿದ್ದಿರುವ ಪ್ಯಾರಾಚ್ಯೂಟ್ ಹಾಗೂ ಪೇಲೋಡ್, ಅದಕ್ಕೆ ಸಂಬಂಧಿಸಿದ ಸಾಧನಾ ಸಲಕರಣೆಗಳನ್ನು ತೆಗೆದುಕೊಂಡು ಹೋಗಲಿದೆ. ಈ ಬಗ್ಗೆ ಯಾರೂ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net