

ತುಮಕೂರು: ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದರ ಸಾರಿಗೆ ಸಚಿವ ಶ್ರೀರಾಮುಲು ಸರ್ಕಾರದ ವತಿಯಿಂದ ಪರಿಹಾರ ಘೋಷಣೆ ಮಾಡಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ 1 ಲಕ್ಷ ರೂಪಾಯಿ ಕೊಡುವುದಾಗಿ ಸಾರಿಗೆ ಸಚಿವರು ಇದೇ ವೇಳೆ ಹೇಳಿದರು.
ಪಾವಗಡ ಸರ್ಕಾರಿ ಆಸ್ಪತ್ರೆಗೂ ಭೇಟಿ ನಿಡಿದ ಶ್ರೀರಾಮುಲು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಪಾವಗಡ ಸರ್ಕಾರಿ ಆಸ್ಪತ್ರೆ ಶವಾಗಾರದ ಮುಂದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಶ್ರೀರಾಮುಲು ಅವರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಈ ಸಾವಿಗೆ ಯಾರು ಹೊಣೆ? ನಮ್ಮ ಕುಟುಂಬದ ಗತಿಯೇನು? ಎಂದು ಕಣ್ಣೀರು ಹಾಕಿದರು.
ಬಸ್ ಪಲ್ಟಿಯಾದ ದುರಂತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿ ಐವರು ದುರ್ಮರಣಕ್ಕೀಡಾಗಿದ್ದಾರೆ. 43 ಮಂದಿ ಗಾಯಗೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಾದ ಪೋತಗಾನಹಳ್ಳಿ ಅಮೂಲ್ಯ(20), ದಾದಾವಲಿ(20) ಹಾಗೂ ಸೂಲನಾಯಕನಹಳ್ಳಿಯ ಅಜಿತ್ ಕುಮಾರ್(22), ಬೆಸ್ತರಹಳ್ಳಿಯ ಮೆಕಾನಿಕ್ ಶಾನವಾಜ್ (18) ಹಾಗೂ ವೈ.ಎನ್.ಹೊಸಕೋಟೆಯ ಕಲ್ಯಾಣ್ ಕುಮಾರ್(22) ಮೃತಪಟ್ಟಿದ್ದಾರೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ದಾದಾವಲಿ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಸ್ಥಳೀಯರು ಮಾತ್ರ 8 ಮಂದಿ ಮೃತಪಟ್ಟಿದ್ದಾರೆ ಎನ್ನುತ್ತಿದ್ದಾರೆ.