ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ

12 SRS 3A
Published on

ಶಿರಸಿ: ಕದಂಬೋತ್ಸವದ ಅಂಗವಾಗಿ ತಾಲೂಕಿನ ಬನವಾಸಿ ಮಧುಕೇಶ್ವರ ದೇವಸ್ಥಾನದಿಂದ ಸ್ಥಬ್ಧ ಚಿತ್ರಗಳು, ಸಾಂಸ್ಕೃತಿಕ ಕಲಾ ಪ್ರಕಾರಗಳ ಆಕರ್ಷಕ ಮೆರವಣಿಗೆ ಶನಿವಾರ ನಡೆಯಿತು.

ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಯಲ್ಲಿ ಗಮನ ಸೆಳೆದವು.

ಬನವಾಸಿ ಉಮಾಮಧುಕೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಕದಂಬೋತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು. ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತ, ಶಿರಸಿ ಬೇಡರವೇಷ, ಕದಂಬ ಜ್ಯೋತಿ, ಶಾಂತಾರಾಮ ಶೆಟ್ಟಿಯ ಆಂಜನೇಯ, ಬನವಾಸಿಯ ನಾಗಶ್ರೀ ಪ್ರೌಢಶಾಲೆಯ ಸಮವಸ್ತ್ರ ತಂಡ, ಬಾವುಟ ತಂಡ, ನರಗುಂದ ಮಹಿಳಾ ತಂಡದ ಡೊಳ್ಳುಕುಣಿತ, ಶಿರಸಿ ತಾಲೂಕು ದೈವಜ್ಞ ಮಹಿಳಾ ಮಂಡಳದ ಚಂಡೆ ವಾದ್ಯ, ಶಿವಶಂಕರ ತುಮಕೂರು ತಂಡದ ಅರೆವಾದ್ಯ, ಆನಂದ ಜೋಗಿಯ ಕೀಲುಕುದರೆ, ಉದಯಕುಮಾರ ಕಾರಬಾಳಿಯ ವೀರಗಾಸೆ, ಹೊನ್ನಾವರ ಸುಗ್ಗಿ ತಂಡದ ಸುಗ್ಗಿ ಕುಣಿತ, ಡೊಳ್ಳುಚಂದ್ರ ಬೆಂಗಳೂರ ಅವರ ಕೋಳಿ ನೃತ್ಯ, ನಿಖಿಲ ನಾಯಕ ಸಂಗಡಿಗರ ಮರಕಾಲು ನೃತ್ಯ, ಫಕೀರಪ್ಪ ಭಜಂತ್ರಿ ಬನವಾಸಿಯ ಪಂಚವಾದ್ಯ, ಕಲಘಟಗಿಯ ಮಾರಿಕಾಂಬಾ ಯುವತಿ ಸಂಘದ ಲಮಾಣಿ ನೃತ್ಯ, ಮೊಗವಳ್ಳಿಯ ಬಸವೇಶ್ವರ ಡೊಳ್ಳು ಮೇಳದ ಡೊಳ್ಳು ಕುಣಿತ ಸೇರಿ ವಿವಿಧ ಸರ್ಕಾರಿ ಇಲಾಖೆಯ ರೂಪಕ ತಂಡ, ಶಿರಸಿಯ ಶಾಸಕರ ಮಾದರಿ ಹಿಪ್ರಾಶಾಲೆಯ ವಿದ್ಯಾರ್ಥಿಗಳ ವಾದ್ಯತಂಡ, ಬನವಾಸಿ, ಭಾಷಿ, ತಿಗಣಿ, ಅಂಡಗಿ, ನರೂರು, ಸಣ್ಣಮನೆ, ಗುಡ್ನಾಪುರ ಶಾಲೆಗಳ ಸಮವಸ್ತ್ರ ತಂಡಗಳು ಸೇರಿ 68 ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಚಾಲನೆ ನೀಡಿದರು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಬನವಾಸಿ ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ, ಡಿಡಿಪಿಐ ಪಿ. ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net