

ಮಂಡ್ಯ: ಕರೊನಾ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡದ ಹಿನ್ನೆಲೆ ಪಾಂಡವಪುರ ತಾಲೂಕು ವೈದ್ಯಾಧಿಕಾರಿ ಡಾ.ಅರವಿಂದ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ಶಾಸಕ ಪುಟ್ಟರಾಜು ಭೇಟಿ ನೀಡಿದ್ದ ವೇಳೆ ಕರೊನಾ ಸೋಂಕಿತರಿಂದ ದೂರು ಕೇಳಿ ಬಂತು. ಪೇಸೆಂಟ್ ಕಡೆಯವರು ನಿನಗೆ ಫೋನ್ ಮಾಡಿದ್ರೆ ಎಂಎಲ್ಎ ಕೇಳಿ ಎಂದು ಯಾಕ್ ಹೇಳ್ತೀಯಾ? ಇದರರ್ಥ ಏನು? ನಮ್ಮನ್ನ ಸಂಬಳಕ್ಕಿಟ್ಟು ಕೊಂಡಿದ್ದೀಯೇನಯ್ಯಾ? 20 ಸಾವಿರ ಕೇಳಿದ್ರೆ ಹತ್ತು ಸಾವಿರ ಜಾಸ್ತಿ ಟಿಪ್ಸ್ ಕೊಟ್ಟು ಕಳುಹಿಸ್ತೀನಿ. ನಮ್ ಹೆಸರು ಯಾಕ್ ಹೇಳ್ತೀಯಾ? ನಿನಗೆ ಜವಾಬ್ದಾರಿ ಇಲ್ವಾ? ಎಂದು ಟಿಎಚ್ಒ ವಿರುದ್ಧ ಕಿಡಿಕಾರಿದರು.
ಮಾಡೋದಾದ್ರೆ ಸರಿಯಾಗಿ ಕೆಲ್ಸ ಮಾಡು. ಇಲ್ಲವೇ ನಡಿ ಪಿಎಚ್ಸಿಯಲ್ಲಿ ಕೆಲ್ಸ ಮಾಡು. ಇದೇ ಫಸ್ಟ್ ಆ್ಯಂಡ್ ಲಾಸ್ಟ್. ಏನ್ ಕಷ್ಟಪಡ್ತಿದ್ದೀವಿ ಅಂತ ತಹಸೀಲ್ದಾರ್ ಕೇಳು. ಇದೆಲ್ಲಾ ನಿನಗೆ ಗೌರವ ಅಲ್ಲ. ನಿನ್ ಮೇಲೆ ನಾನು, ನನ್ ಮೇಲೆ ನೀನು ಹೇಳ್ಕೊಂಡು ಹೋಗೋ ಕಾಲ ಅಲ್ಲ ಇದು. ಒಬ್ಬೊಬ್ಬರಿಗೂ ಜವಾಬ್ದಾರಿ ಇದೆ, ಕೆಲ್ಸ ಮಾಡ್ಕೊಂಡು ಹೋಗಬೇಕಷ್ಟೆ. ಟೂ ಮಚ್ ಆಯ್ತು ಇದು ಎಂದು ಪುಟ್ಟರಾಜು ಗರಂ ಆದರು.
ನಾವು ಮಾತ್ರೆ ತಗೋಬೇಕು ಎಂದು ಬೆಳಗ್ಗೆ ಏಳೂವರೆಗೆಲ್ಲ ತಗೊಂಡು ಮನೆಯಿಂದ ಈಚೆಗೆ ಬರ್ತೀವಿ. ನೀನಿಲ್ಲಿ ರೋಗಿಗಳಿಗೆ ಹತ್ತೂವರೆಯಾದ್ರೂ ಊಟ ಕೊಡ್ಸಿಲ್ಲಾ ಅಂದ್ರೆ ಏನರ್ಥ. ಸಕ್ಕರೆ ಕಾಯಿಲೆ, ಬಿಪಿ ಇರೋರ ಕತೆ ಏನಾಗಬೇಕು? ಎಂದು ಟಿಎಚ್ಒಗೆ ಕ್ಲಾಸ್ ತೆಗೆದುಕೊಂಡರು.