ಸತಿ-ಪತಿಗಳಾದ ಬಿಗ್‌ಬಾಸ್ ಜೋಡಿ

8
Published on

ಮೈಸೂರು: ‘ಬಿಗ್‌ಬಾಸ್’ ಜೋಡಿಗಳಾದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾಗೌಡ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗೌಡ ಹಾಗೂ ಶೆಟ್ಟಿ ಸಮುದಾಯದ ಶಾಸ್ತ್ರದಂತೆ ಮದುವೆ ನೆರವೇರಿತು. ಬೆಳಗ್ಗೆ 8.15 ರಿಂದ 9 ಗಂಟೆಗೆ ಮೀನ ಲಗ್ನದ ಧಾರಾಮುಹೂರ್ತದಲ್ಲಿ ನಿವೇದಿತಾ ಅವರನ್ನು ಚಂದನ್ ವರಿಸಿದರು.

ನಿವೇದಿತಾ ಪಾಲಕರಾದ ಹೇಮಾ ಮತ್ತು ರಮೇಶ್, ಚಂದನ್ ಪಾಲಕರಾದ ಪ್ರೇಮಲತಾ ಮತ್ತು ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳು ಈ ಲಗ್ನಕ್ಕೆ ಸಾಕ್ಷಿಯಾದರು.

ಮಂಗಳವಾರ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಇದರಲ್ಲಿ ನಟರಾದ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಸೇರಿ ಸಿನಿಮಾ ಕಲಾವಿದರು, ಗಣ್ಯರು ಪಾಲ್ಗೊಂಡಿದ್ದರು. ಮದುವೆ ಕಾರ್ಯಕ್ರಮದಲ್ಲಿ ಸಂಬಂಧಿಕರು, ಆಪ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಜಾಗ್ವಾರ್ ಕಾರ್ ಗಿಫ್ಟ್: ನವ ವಧು ವರರಿಗೆ ಹೊಸ ಕಾರು ಉಡುಗೊರೆ ನೀಡಲಾಯಿತು. ಚಂದನ್ ಕುಟುಂಬಸ್ಥರಿಂದ ಜಾಗ್ವಾರ್ ಕಾರು ಗಿಫ್ಟ್ ದೊರೆಯಿತು. ಕಲ್ಯಾಣ ಮಂಟಪದ ಎದುರು ಕಾರು ನಿಲ್ಲಿಸಿ ನವ ಜೋಡಿಗೆ ಅಚ್ಚರಿ ನೀಡಲಾಯಿತು.

ಗೃಹಸ್ಥಾಶ್ರಮ ಸೇರಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಚಂದನ್ ಶೆಟ್ಟಿ, ಇಂದಿನಿಂದ ಜೀವನ ಬೇರೆ ತರಹ ಇರುತ್ತದೆ. ಇಷ್ಟು ದಿನ ಒಬ್ಬನೇ ಮನೆಯಲ್ಲಿ ಇರುತ್ತಿದ್ದೆ. ಇನ್ಮುಂದೆ ನನ್ನ ಜತೆ ಹೆಂಡತಿ ಕೂಡ ಇರುತ್ತಾಳೆ. ತುಂಬ ಖುಷಿಯಾಗುತ್ತಿದೆ. ಜೀವನದಲ್ಲಿ ಮದುವೆ ಅನ್ನೋದು ಬಹಳ ಮುಖ್ಯ. ಇವತ್ತಿನಿಂದ ಜೀವನವೂ ಚೆನ್ನಾಗಿರುತ್ತೆ ಅಂದುಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡರು.

ರಾಜ್ಯದ ಜನರ ಮತ್ತು ಅಭಿಮಾನಿಗಳ ಆಶೀರ್ವಾದದಿಂದ ನಾವಿಬ್ಬರು ಮದುವೆಯಾಗಿದ್ದೇವೆ. ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂತೆ ವಿವಾಹ ಮಾಡಿಕೊಳ್ಳಬೇಕು ಅಂದುಕೊಂಡಿದ್ದವು. ಅದೇ ರೀತಿ ಮದುವೆ ಕೂಡ ಅದ್ದೂರಿಯಾಗಿ ಆಗಿದೆ ಎಂದರು.

ನಿವೇದಿತಾ ಗೌಡ ಮಾತನಾಡಿ, ನಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿದ್ದು ಖುಷಿಯಾಗಿದೆ. ನನ್ನ ಕನಸು ನನಸಾಗಿದೆ. ಮದುವೆ ನಿಶ್ಚಯವಾಗಿದ್ದಾಗಿಂದಲೂ ಶುಭ ಹಾರೈಕೆಗಳು ಬರುತ್ತಿದ್ದವು. ಅದರಲ್ಲೂ ನಿನ್ನೆ ನನಗೆ ಮತ್ತಷ್ಟು ಖುಷಿಯಾಗಿದೆ. ಬಹಳಷ್ಟು ಜನ ಬಂದು ಶುಭ ಕೋರಿದ್ದಾರೆ. ಅವರ ಪ್ರೀತಿ ನಮಗೆ ಸ್ಫೂರ್ತಿ ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net