

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಡಾಡಿ ದನಗಳಿಂದ ಬೇರ್ಪಟ್ಟಿದ್ದ ಎಮ್ಮೆ ಕರುವೊಂದನ್ನು ಬೀದಿನಾಯಿಗಳ ಕಚ್ಚಿ ತಿಂದ ಹೃದಯವಿದ್ರಾವಕ ಘಟನೆ ನಗರದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಬಿಡಾಡಿ ದನಗಳೊಂದಿಗೆ ಇರುತ್ತಿದ್ದ ಕರು ಬೇರ್ಪಟ್ಟು ಬಿಆರ್‌ಟಿಎಸ್ ಟರ್ಮಿನಲ್ ಬಳಿ ನಿಂತಿತ್ತು. ಈ ವೇಳೆ ದಾಳಿ ಮಾಡಿದ ಸುಮಾರು 25 ಬೀದಿನಾಯಿಗಳು ಕರುವನ್ನು ಕಚ್ಚಿ ತಿಂದಿವೆ. ಬೆಳಗಿನ ಜಾವ ಬೇರೆ ಊರುಗಳಿಂದ ಬಂದಿಳಿಯುವ ಪ್ರಯಾಣಿಕರು, ವಾಕಿಂಗ್ ಮಾಡುವವರು, ದಿನಪತ್ರಿಕೆ ಏಜೆಂಟರು ಮತ್ತು ಪೇಪರ್ ಹಾಕುವ ಹುಡುಗರ ಸಂಚಾರವಿರುತ್ತದೆ. ಪ್ರತಿದಿನ ಬೀದಿನಾಯಿಗಳ ಹಿಂಡು ಇಲ್ಲಿ ಬೀಡು ಬಿಟ್ಟಿರುತ್ತದೆ. ಇದರಿಂದ ಒಂಟಿಯಾಗಿ ಸಂಚರಿಸಲು ಭಯವಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿ ಎಸ್.ಬಿ. ಸುಣಗಾರ ಪ್ರತಿಕ್ರಿಯಿಸಿದ್ದಾರೆ. ಪಾಲಿಕೆಯವರು ಕೂಡಲೇ ಕ್ರಮ ಕೈಗೊಂಡು ಬೀದಿನಾಯಿಗಳ ಹಾವಳಿ ತಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.